ಚಿಕ್ಕಮಗಳೂರು: ಕರ್ನಾಟಕದ ಮೋಸ್ಟ್ ವಾಂಟೆಡ್ ಭೂಗತ ನಕ್ಸಲ್ ಸುರೇಶ್ ಬಂಧನ…

51
firstsuddi

ಚಿಕ್ಕಮಗಳೂರು: ಕರ್ನಾಟಕದ ಮೋಸ್ಟ್ ವಾಂಟೆಡ್ ಭೂಗತ ನಕ್ಸಲ್ ಸುರೇಶ್​ನನ್ನು ಕೇರಳದ ಕಣ್ಣೂರು ಸರ್ಕಾರಿ ಆಸ್ಪತ್ರೆಯಲ್ಲಿ ಬಂಧಿಸಲಾಗಿದೆ.

ಸುರೇಶ್ ಮೂಲತಃ ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಅಂಗಡಿ ಗ್ರಾಮದವನು. 2003ರಲ್ಲಿ ನಕ್ಸಲ್ ಚಟುವಟಿಕೆಯಲ್ಲಿ ಪಾಲ್ಗೊಂಡಿದ್ದ ಸುರೇಶ್ ಕಳೆದ 21 ವರ್ಷಗಳಿಂದ ನಾಪತ್ತೆಯಾಗಿದ್ದ. ಕರ್ನಾಟಕ, ಕೇರಳ ಮತ್ತು ತಮಿಳುನಾಡು ಪೊಲೀಸರು ಈ ಮೋಸ್ಟ್ ವಾಂಟೆಡ್ ನಕ್ಸಲ್‌ಗಾಗಿ ಹುಡುಕಾಡುತ್ತಿದ್ದರು. ಅಲ್ಲದೇ ಪೊಲೀಸ್ ಇಲಾಖೆ, ಸುರೇಶ್ ಮಾಹಿತಿ ನೀಡಿದವರಿಗೆ 5 ಲಕ್ಷ ಬಹುಮಾನ ಘೋಷಣೆ ಮಾಡಿತ್ತು. ಆದರೆ ಕಳೆದ 21 ವರ್ಷಗಳಿಂದ ಪೊಲೀಸರ ಕೈಗೆ ಸಿಗದೇ ನಾಪತ್ತೆಯಾಗಿದ್ದು, ಇದೀಗ ಕಾಡಾನೆಯಿಂದ ಕೇರಳ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾನೆ.

ನಿನ್ನೆ ಸುರೇಶ್ ತನ್ನ ನಕ್ಸಲ್ ತಂಡದೊಂದಿಗೆ ಕೇರಳದ ಕಣ್ಣೂರಿನ ಕಂಚಿಕೊಲ್ಲಿ ಅರಣ್ಯ ಪ್ರದೇಶದಲ್ಲಿ ಹೋಗುತ್ತಿದ್ದ ವೇಳೆ ಕಾಡಾನೆಗಳು ನಕ್ಸಲರ ಮೇಲೆ ದಾಳಿ ಮಾಡಿವೆ. ಆನೆ ದಾಳಿಯಿಂದ ಸುರೇಶ್ ಗಂಭೀರವಾಗಿ ಗಾಯಗೊಂಡಿದ್ದಾನೆ. ಬಳಿಕ ಆತನನ್ನು ಉಳಿದ ನಕ್ಸಲರು ಅಲ್ಲೇ ಬಿಟ್ಟು ಪರಾರಿಯಾಗಿದ್ದರು. ಗಾಯಗೊಂಡ ಸುರೇಶ್ ನಡೆಯಲಾಗದೇ ಕಾಡಿನಲ್ಲೇ ಇದ್ದ.

ಆತನನ್ನು ಸ್ಥಳೀಯ ಆದಿವಾಸಿಗಳು ರಕ್ಷಿಸಿ ಪ್ರಾಥಮಿಕ ಚಿಕಿತ್ಸೆ ನೀಡಿ ಆಸ್ಪತ್ರೆಗೆ ದಾಖಲಿಸಿದ್ದರು. ಈ ವೇಳೆ ಕೇರಳ ಪೊಲೀಸರು ಆಗಮಿಸಿ ಚಿಕಿತ್ಸೆ ಪಡೆಯುತ್ತಿದ್ದ ಸುರೇಶ್ ಅನ್ನು ವಶಕ್ಕೆ ಪಡೆದಿದ್ದಾರೆ. ಸದ್ಯ ನಕ್ಸಲ್ ಸುರೇಶ್ ಕಣ್ಣೂರಿನ ಮೆಡಿಕಲ್ ಕಾಲೇಜಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.

ಸುರೇಶ್ ಅಲಿಯಾಸ್ ಪ್ರದೀಪ್ ಕರ್ನಾಟಕ ಕೇಡರ್ ನಕ್ಸಲ್ ಆಗಿ ಗುರುತಿಸಿಕೊಂಡಿದ್ದನು. ಇವರೆಗೂ ಕರ್ನಾಟಕದಲ್ಲಿ ಒಟ್ಟು 26ಕ್ಕೂ ಹೆಚ್ಚು ಪ್ರಕರಣಗಳು ಸುರೇಶ್ ಮೇಲೆ ದಾಖಲಾಗಿವೆ.