ಚಿಕ್ಕಮಗಳೂರು : ಕಾಂಗ್ರೆಸ್ಸಿಗರು ಸಿದ್ದಾಂತದ ಬದ್ಧತೆಗೆ ಕೆಲಸ ಮಾಡುವುದಿಲ್ಲ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ಅವರು ಹೇಳಿದ್ದಾರೆ. ಜಿಲ್ಲೆಯ ಕಡೂರು ತಾಲ್ಲೂಕಿನ ಬೀರೂರಿನಲ್ಲಿ ಗ್ರಾಮ ಸ್ವರಾಜ್ಯ ಕಾರ್ಯಕ್ರಮದಲ್ಲಿ ಭಾಗವಹಿಸುವುದಕ್ಕೂ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ನಾಯಕರು ಕಾಂಗ್ರೆಸ್ ಕಚೇರಿಯಲ್ಲಿ ಭಾರತ್ ಮಾತಾ ಕೀ ಜೈ ಎಂದು ಘೋಷಣೆ ಕೂಗಬೇಡಿ. ನೀವೇನೂ ಬಿಜೆಪಿಯವರ ಯಾಕೆ ಹಾಗೇ ಕೂಗುತ್ತೀರ ಎಂದು ಕಾರ್ಯಕರ್ತರಿಗೆ ಗದರಿಸುತ್ತಾರೆ. ದೇಶಕ್ಕೆ ಜೈಕಾರ ಹಾಕುವುದು ಅವರ ದೃಷ್ಠಿಯಲ್ಲಿ ಬಿಜೆಪಿಯವರು ಮಾತ್ರ ಅಂದುಕೊಂಡಿದ್ದರಿಂದ ಇಂದು ಕಾಂಗ್ರೆಸ್ ಪಕ್ಷ ಹೀನಾಯ ಸ್ಥಿತಿಗೆ ತಲುಪಿದೆ. ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಸೋಲುತ್ತಿದ್ದಂತೆ ಇವಿಎಂ ಮೇಲೆ ಆರೋಪ ಮಾಡುತ್ತಾರೆ. ಆದರೆ ನಾವು ಜನರೊಂದಿಗೆ ನಿರಂತರ ಸಂಪರ್ಕ ಇಟ್ಟುಕೊಂಡು ಪಕ್ಷದ ಚಟುವಟಿಕೆಗಳಲ್ಲಿ ನಿರಂತರವಾಗಿ ಭಾಗಿಯಾಗುತ್ತೇವೆ ಎಂದು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.









