ಚಿಕ್ಕಮಗಳೂರು : ಕಾಂಗ್ರೇಸ್ ಕಾರ್ಯಕರ್ತರು ತಮ್ಮಲ್ಲಿರುವ ಭಿನ್ನಾಭಿಪ್ರಾಯಗಳನ್ನು ಬಿಟ್ಟು ಜಿಲ್ಲೆಯಲ್ಲಿ ಪಕ್ಷದ ಬಲವರ್ಧನೆಗೆ ಮುಂದಾಗಬೇಕು : ಮಂಜುನಾಥ ಭಂಡಾರಿ.

151
firstsuddi

ಚಿಕ್ಕಮಗಳೂರು : ಕಾಂಗ್ರೇಸ್ ಕಾರ್ಯಕರ್ತರು ಮತ್ತು ಮುಖಂಡರು ತಮ್ಮಲ್ಲಿರುವ ಭಿನ್ನಾಭಿಪ್ರಾಯಗಳನ್ನು ಬಿಟ್ಟು ಜಿಲ್ಲೆಯಲ್ಲಿ ಪಕ್ಷದ ಬಲವರ್ಧನೆಗೆ ಮುಂದಾಗಬೇಕು ಎಂದು ಕೆಪಿಸಿಸಿ ಉಪಾಧ್ಯಕ್ಷ ಮಂಜುನಾಥ ಭಂಡಾರಿ ಮನವಿ ಮಾಡಿದರು.
ನಗರದ ಕಾಂಗ್ರೇಸ್ ಕಛೇರಿಯಲ್ಲಿ ನಡೆದ ಪಕ್ಷದ ಮುಖಂಡರ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರಿಗೆ ರಾಜಕೀಯ ಪುನರ್ಜನ್ಮ ನೀಡಿದ ಚಿಕ್ಕಮಗಳೂರು ಜಿಲ್ಲೆ ಹಿಂದೆ ಕಾಂಗ್ರೇಸ್‍ನ ಭದ್ರಕೋಟೆಯಾಗಿತ್ತು, ಜಿ.ಪಂ., ತಾ.ಪಂ, ಗ್ರಾ.ಪಂ ಸೇರಿದಂತೆ ಎಲ್ಲಾ ರಂಗಗಳಲ್ಲೂ ಪಕ್ಷದ ಪ್ರಾಬಲ್ಯತೆಯಿತ್ತು, ಇತ್ತೀಚಿನ ವರ್ಷಗಳಲ್ಲಿ ಪಕ್ಷ ಜಿಲ್ಲೆಯಲ್ಲಿ ಸೊರಗುತ್ತಿರುವುದಕ್ಕೆ ಮೂಲ ಕಾರಣ ಕಾರ್ಯಕರ್ತರು ಮತ್ತು ಮುಖಂಡರ ನಡುವೆ ಇರುವ ಭಿನ್ನಾಭಿಪ್ರಾಯ ಎಂದರು.
ಮುಖಂಡರು ಮತ್ತು ಕಾರ್ಯಕರ್ತರು ಈಗಲಾದರೂ ಎಚ್ಚೆತ್ತುಕೊಳ್ಳಬೇಕು, ರಾಜ್ಯಾಧ್ಯಕ್ಷ ಡಿ.ಕೆ.ಶಿವಕುಮಾರ್ ಅವರ ಮಾರ್ಗದರ್ಶನದಲ್ಲಿ ಎಲ್ಲರೂ ಒಂದಾಗಿ ಮುನ್ನಡೆಯಬೇಕು, ಜಿಲ್ಲೆಯನ್ನು ಮತ್ತೊಮ್ಮೆ ಪಕ್ಷದ ಭದ್ರಕೋಟೆಯನ್ನಾಗಿ ಮಾಡಬೇಕು, ಮುಂಬರುವ ಜಿ.ಪಂ ಮತ್ತು ಗ್ರಾ.ಪಂ ಚುನಾವಣೆಯಿಂದಲೇ ಪಕ್ಷವನ್ನು ಬೆಳೆಸುವ ಕಾರ್ಯ ಆರಂಭಿಸಬೇಕು ಎಂದು ಕಿವಿಮಾತು ಹೇಳಿದರು.
ಕಾಂಗ್ರೇಸ್ ಜಿಲ್ಲಾಧ್ಯಕ್ಷ ಡಾ|| ಅಂಶುಮತ್ ಮಾತನಾಡಿ ರಾಜ್ಯಾಧ್ಯಕ್ಷ ಡಿ.ಕೆ.ಶಿವಕುಮಾರ್ ಅವರ ಪದಗ್ರಹಣ ಕಾರ್ಯಕ್ರಮವನ್ನು ಜಿಲ್ಲೆಯಲ್ಲಿ ಅತ್ಯಂತ ಯಶಸ್ವಿಗೊಳಿಸಲಾಗುವುದು ಎಂದು ತಿಳಿಸಿದರು.
ಪಕ್ಷದ ಮುಖಂಡರಾದ ಸಗೀರ್ ಅಹಮದ್, ಮೋಟಮ್ಮ, ಡಾ.ಡಿ.ಎಲ್.ವಿಜಯಕುಮಾರ್, ಬಿ.ಎಂ.ಸಂದೀಪ್, ಎಂ.ಸಿ.ಶಿವಾನಂದ ಸ್ವಾಮಿ, ಗಾಯತ್ರಿ ಶಾಂತೇಗೌಡ, ಎಂ.ಎಲ್.ಮೂರ್ತಿ, ಎ.ಎನ್.ಮಹೇಶ್, ಕೆ.ಮಹಮ್ಮದ್, ಶ್ರೀನಿವಾಸ್, ಹೆಚ್.ಎಂ.ನಾಗರಾಜ್ ಸಭೆಯಲ್ಲಿ ಪಾಲ್ಗೊಂಡಿದ್ದರು.