ಚಿಕ್ಕಮಗಳೂರು : ನಕಲಿ ಪ್ರಮಾಣ ಪತ್ರ ಪಡೆದು ವಂಚಿಸಿರುವ ವ್ಯಕ್ತಿಯನ್ನು ಬಂಧಿಸುವಂತೆ ಬಿಎಸ್‍ಪಿ ವತಿಯಿಂದ ಜಿಲ್ಲಾಡಳಿತಕ್ಕೆ ಒತ್ತಾಯ…

346
firstsuddi

ಚಿಕ್ಕಮಗಳೂರು : ಅಕ್ರಮವಾಗಿ ಸುಳ್ಳು ಜಾತಿ ಪ್ರಮಾಣ ಪತ್ರ ಪಡೆದು ವಂಚಿಸಿರುವ ಮೇಲ್ವರ್ಗದ ವ್ಯಕ್ತಿಯ ವಿರುದ್ದ ಕ್ರಿಮಿನಲ್ ಪ್ರಕರಣ ದಾಖಲಿಸಿ ತಕ್ಷಣ ಅವರನ್ನು ಬಂಧಿಸುವಂತೆ ಬಹುಜನ ಸಮಾಜಪಕ್ಷ ತಾಲ್ಲೂಕು ಆಡಳಿತವನ್ನು ಒತ್ತಾಯಿಸಿದೆ.
ತಹಸೀಲ್ದಾರ್ ಡಾ|| ಕೆ.ಜೆ.ಕಾಂತರಾಜ್ ಅವರನ್ನು ಇಂದು ಭೇಟಿ ಮಾಡಿದ ಪಕ್ಷದ ಪದಾಧಿಕಾರಿಗಳು ಈ ಸಂಬಂಧ ಮನವಿ ಸಲ್ಲಿಸಿದರು.
ತಾಲ್ಲೂಕಿನ ಕಸಬಾ ಹೋಬಳಿ ಒಡೆಯರ ಪುರದ ಗೌಂಡರ್ ಜಾತಿಗೆ ಸೇರಿದ ಕೆ.ಸುರೇಶ್ ಎಂಬುವರು ತಹಸೀಲ್ದಾರ್ ಕಛೇರಿಯಿಂದ ಪರಿಶಿಷ್ಠ ಜಾತಿಯ ಸುಳ್ಳು ಪ್ರಮಾಣ ಪತ್ರವನ್ನು ಅಕ್ರಮವಾಗಿ ಪಡೆದು ಇತ್ತೀಚೆಗೆ ನಡೆದ ಗ್ರಾ.ಪಂ.ಚುನಾವಣೆಯಲ್ಲಿ ಸ್ಪರ್ಧಿಸಿ ವಿಜೇತರಾಗಿದ್ದಾರೆ ಎಂದು ಆರೋಪಿಸಿದರು.
ಇದರಿಂದಾಗಿ ಪ.ಜಾತಿ/ಪ.ವರ್ಗಕ್ಕೆ ಅನ್ಯಾಯವಾಗಿದೆ. ಕಾನೂನು ಬಾಹಿರವಾಗಿ ಪಡೆದಿರುವ ಸುಳ್ಳು ಪ್ರಮಾಣ ಪತ್ರದಿಂದ ಪರಿಶಿಷ್ಠರಿಗೆ ಮೀಸಲಿರುವ ಸವಲತ್ತುಗಳ ದುರುಪಯೋಗವಾಗಿದೆ ಎಂದ ಪದಾಧಿಕಾರಿಗಳು ಈ ಹಿನ್ನೆಲೆಯಲ್ಲಿ ಸುಳ್ಳು ಪ್ರಮಾಣ ಪತ್ರವನ್ನು ವಜಾ ಮಾಡುವುದರ ಜೊತೆಗೆ ಪರಿಶಿಷ್ಠ ದೌರ್ಜನ್ಯ ಕಾಯ್ದೆಯಡಿ ಆ ವ್ಯಕ್ತಿಯನ್ನು ಬಂಧಿಸಬೇಕು ಎಂದು ಆಗ್ರಹಿಸಿದರು.
ಮನವಿಗೆ ಪ್ರತಿಕ್ರಿಯಿಸಿದ ತಹಸೀಲ್ದಾರ್ ಡಾ|| ಕೆ.ಜೆ.ಕಾಂತರಾಜ್ ಸುಳ್ಳು ಪ್ರಮಾಣ ಪತ್ರ ಪಡೆದಿರುವುದು ಧೃಡಪಟ್ಟಲ್ಲಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.
ಬಿಎಸ್‍ಪಿ ಜಿಲ್ಲಾಧ್ಯಕ್ಷ ಕೆ.ಟಿ.ರಾಧಾಕೃಷ್ಣ, ಕಛೇರಿ ಕಾರ್ಯದರ್ಶಿ ಕೆ.ಆರ್.ಗಂಗಾಧರ್, ಖಜಾಂಚಿ ವಾಹೀದ್ ಜಾನ್, ಜಿಲ್ಲಾ ಸಹೋದರತ್ವ ಸಮಿತಿಯ ಅಧ್ಯಕ್ಷೆ ಕೆ.ಬಿ.ಸುಧಾ, ಕೆ.ಎಸ್.ಮಂಜುಳಾ, ತಾಲ್ಲೂಕು ಅಧ್ಯಕ್ಷ ಹರೀಶ್ ಮಿತ್ರ, ಆರ್.ವಸಂತ, ಹನುಮಂತರಾಯ, ವಿನೂತ್, ಪುಟ್ಟಸ್ವಾಮಿ ಹಾಜರಿದ್ದರು.