ಹೆಜಮಾಡಿ ಮೀನುಗಾರಿಕಾ ಬಂದರಿಗೆ ಮುಖ್ಯಮಂತ್ರಿ ಯಡಿಯೂರಪ್ಪ ಶಿಲಾನ್ಯಾಸ…

128
firstsuddi

ಉಡುಪಿ: ಮೀನುಗಾರರ ಸುದೀರ್ಘ ಹೋರಾಟದ ಫಲವಾಗಿ ಕಾಪು ತಾಲೂಕಿನ ಹೆಜಮಾಡಿ ಕೋಡಿಯಲ್ಲಿ 180.8 ಕೋಟಿಯ ವಿವಿಧ ಸವಲತ್ತುಗಳ ಕಾರ್ಯ ಯೋಜನೆಯ ಮೀನುಗಾರಿಕಾ ಬಂದರು ಕಾಮಗಾರಿಗೆ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪನವರು ಶಿಲಾನ್ಯಾಸ ನೆರವೇರಿಸಿದರು.

ಬಳಿಕ ಮಾತನಾಡಿದ ಅವರು ಹೆಜಮಾಡಿ ಬಂದರು ಯೋಜನೆಯನ್ನು ಕಳೆದ ವರ್ಷದ ಬಜೆಟ್ ನಲ್ಲಿ ಘೋಷಿಸಿದ್ದು, ಇತ್ತೀಚಿನ ರಾಜ್ಯ ಕ್ಯಾಬಿನೆಟ್ ಸಭೆಯಲ್ಲಿ ಅದರ ನಿರ್ಮಾಣಕ್ಕೆಆಗಿ ಹಣವನ್ನು ಬಿಡುಗಡೆ ಮಾಡಲು ಒಪ್ಪಿಗೆ ನೀಡಲಾಗಿದೆ. ಬಂದರಿಗೆ ಕೇಂದ್ರದ ರೂ 69.30 ಕೋಟಿ ಮತ್ತು ರಾಜ್ಯದ ಪಾಲು 111.54 ಕೋಟಿ ರೂ. ಆಗಿದ್ದು ಕೇಂದ್ರ ಸರಕಾರ ಈಗಾಗಲೇ ತನ್ನ ಪಾಲಿನಿಂದ 13.86 ಕೋಟಿ ರೂ.ಗಳನ್ನು ಬಿಡುಗಡೆ ಮಾಡಿದೆ, ಹೆಜಮಾಡಿ ಬಂದರು ನಿರ್ಮಾಣದಿಂದ ಮಲ್ಪೆ ಮತ್ತು ಮಂಗಳೂರು ಬಂದರುಗಳ ಮೇಲಿನ ಒತ್ತಡವನ್ನು ಕಡಿಮೆ ಮಾಡುತ್ತದೆ ಎಂದು ನಿರೀಕ್ಷಿಸಲಾಗಿದೆ.

ಮೀನುಗಾರರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ರಾಜ್ಯ ಸರ್ಕಾರ ಬದ್ಧವಾಗಿದ್ದು ಅವರ ಆದಾಯವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಅಗತ್ಯ ನೆರವು ನೀಡುತ್ತದೆ. ಕರ್ನಾಟಕ ಕರಾವಳಿಯು 320 ಕಿ.ಮೀ ಮತ್ತು ಸುಮಾರು 8000 ಹೆಕ್ಟೇರ್ ಹಿನ್ನೀರು ಪ್ರದೇಶ ಹೊಂದಿರುವ ರಾಜ್ಯವು ರಾಷ್ಟ್ರದ ಮೀನುಗಾರಿಕೆ ಕ್ಷೇತ್ರದಲ್ಲಿ ಪ್ರಮುಖ ಪಾತ್ರ ವಹಿಸಿದೆ ಎಂದು ಅವರು ಹೇಳಿದರು.

ಮೀನುಗಾರರ ಸಾಮಾಜಿಕ-ಆರ್ಥಿಕ ಸುಧಾರಣೆಗಾಗಿ ರಾಜ್ಯ ಸರ್ಕಾರ ವಿವಿಧ ಯೋಜನೆಗಳನ್ನು ಜಾರಿಗೆ ತಂದಿದೆ. ಮೀನುಗಾರರು ಪಡೆದ ಸುಮಾರು 60 ಕೋಟಿ ರೂ.ಗಳ ಸಾಲವನ್ನು ಸರ್ಕಾರ ಮನ್ನಾ ಮಾಡಿದೆ. 20-21ರ ರಾಜ್ಯ ಬಜೆಟ್ನಲ್ಲಿ ಮೀನುಗಾರಿಕೆ ಅಭಿವೃದ್ಧಿಗೆ ಬಜೆಟ್ ವಿನಿಯೋಗ 251.57 ಕೋಟಿ ಆಗಿದ್ದು, ಕೇಂದ್ರ ಪ್ರಾಯೋಜಿತ ಯೋಜನೆ 200 ಕೋಟಿ ರೂ. ಮೀನುಗಾರಿಕೆ ಚಟುವಟಿಕೆಗಳಿಗೆ ಡೀಸಿಲ್ ಸಬ್ಸಿಡಿ ನೀಡಲು ಸರ್ಕಾರ 135 ಕೋಟಿ ರೂ. ವ್ಯಯ ಮಾಡಿದೆ ಎಂದರು.

ನಮ್ಮ ಸರ್ಕಾರ ಮೀನುಗಾರರ ಕ್ಷೇತ್ರದ ಕಲ್ಯಾಣದ ಕನಸು ಕಂಡಿದ್ದು, ಸಾಂಕ್ರಾಮಿಕ ರೋಗದಿಂದಾಗಿ ಸರ್ಕಾರ ಆರ್ಥಿಕ ಸಮಸ್ಯೆಗಳನ್ನು ಎದುರಿಸುತ್ತಿದೆ. ಮುಂದಿನ ದಿನಗಳಲ್ಲಿ ನಿಮ್ಮ ಎಲ್ಲಾ ಸಮಸ್ಯೆಗಳನ್ನು ಪರಿಹರಿಸಲು ನಾನು ನನ್ನ ಶಕ್ತಿ ಮೀರಿ ಪ್ರಯತ್ನ ಮಾಡುತ್ತೇನೆ ಎಂದು ಅವರು ಹೇಳಿದರು.

ರಾಜ್ಯ ಮೀನುಗಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿ ಮೀನುಗಾರಿಕಾ ಇಲಾಖೆಗೆ ಸೇರಿರುವ ಸುಮಾರು 70 ಎಕ್ರೆ ಜಾಗದಲ್ಲಿನ ಆಯ್ದ ಭೂಮಿಯಲ್ಲಿ ಮೀನುಗಾರಿಕಾ ಬಂದರಿಗಾಗಿ ಸುಸಜ್ಜಿತ ಮೀನುಗಾರಿಕಾ ಜಟ್ಟಿ, ಬ್ರೇಕ್ವಾಟರ್ ಸೌಲಭ್ಯ, ಬೋಟ್ ರಿಪೇರಿ ಶೆಡ್, ಹರಾಜು ಮಳಿಗೆ, ವರ್ಕ್ಮೆನ್ ಶೆಡ್, ಕಚೇರಿಗಳು, ಶೌಚಾಲಯ, ಕ್ಯಾಟರಿಂಗ್ ಸೌಲಭ್ಯಗಳೊಂದಿಗೆ ಹೆಜಮಾಡಿ ಬಂದರು ನಿರ್ಮಾಣವಾಗಲಿದೆ. ಚೆನ್ನೆ ನ ಶ್ರೀಪತಿ ಎಸೋಸಿಯೇಟ್ಸ್ ಕಂಪೆನಿಯು ಟೆಂಡರ್ ಮೂಲಕವಾಗಿ ಈ ಯೋಜನೆಯನ್ನು ಮೂರು ವರ್ಷಗಳಲ್ಲಿ ಕಾರ್ಯಗತಗೊಳಿಸಲಿದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಪು ಶಾಸಕ ಲಾಲಾಜಿ ಆರ್ ಮೆಂಡನ್ ವಹಿಸಿದ್ದರು. ಕಾರ್ಯಕ್ರಮದಲ್ಲಿ ಶಾಸಕರಾದ ರಘುಪತಿ ಭಟ್, ಉಮಾನಾಥ ಕೋಟ್ಯಾನ್, ಸಂಸದೆ ಶೋಭಾ ಕರಂದ್ಲಾಜೆ, ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರಾದ ಕೆ ಜಯಪ್ರಕಾಶ್ ಹೆಗ್ಡೆ, ಜಿಪಂ ಅಧ್ಯಕ್ಷ ದಿನಕರ ಬಾಬು, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಟ್ಟಾರ್ ರತ್ನಾಕರ ಹೆಗ್ಡೆ, ಕಾಪು ತಾಲೂಕು ಪಂಚಾಯತ್ ಅಧ್ಯಕ್ಷೆ ಶಶಿಪ್ರಭಾ ಶೆಟ್ಟಿ, ಮೀನುಗಾರಿಕಾ ನಿಗಮದ ಅಧ್ಯಕ್ಷರಾದ ನಿತಿನ್ ಕುಮಾರ್, ಸರಕಾರದ ಅಪರ ಮುಖ್ಯ ಕಾರ್ಯದರ್ಶಿ ಡಾ. ಜಿ ಕಲ್ಪನಾ, ದಕ ಮತ್ತು ಉಡುಪಿ ಜಿಲ್ಲಾ ಸಹಕಾರಿ ಮೀನು ಮಾರಾಟ ಮಹಾ ಮಂಡಳಿ ಅಧ್ಯಕ್ಷ ಯಶ್ಪಾಲ್ ಸುವರ್ಣ, ಜಿಪಂ ಉಪಾಧ್ಯಕ್ಷೆ ಶೀಲಾ ಕೆ ಶೆಟ್ಟಿ, ಜಿಪಂ ಸ್ಥಾಯಿ ಸಮಿತಿ ಅಧ್ಯಕ್ಷ ಸುಮಿತ್ ಶೆಟ್ಟಿ, ಜಿಪಂ ಸದಸ್ಯ ಶಶಿಕಾಂತ್ ಪಡುಬಿದ್ರೆ, ತಾಪಂ ಸದಸ್ಯೆ ರೇಣುಕಾ ಪುತ್ರನ್, ಡಾ. ಜಿ ಶಂಕರ್ ಫ್ಯಾಮಿಲಿ ಟ್ರಸ್ಟ್ ಸಂಸ್ಥಾಪಕ ಡಾ ಜಿ ಶಂಕರ್, ಮೀನುಗಾರ ಮುಖಂಡ ಆನಂದ್ ಸಿ ಕುಂದರ್, ಜಿಲ್ಲಾಧಿಕಾರಿ ಜಿ ಜಗದೀಶ್, ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ ನವೀನ್ ಭಟ್, ಪಶ್ಚಿಮ ವಲಯ ಐಜಿಪಿ ದೇವ್ ಜ್ಯೋತಿ ರೇ, ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಎನ್ ವಿಷ್ಣುವರ್ಧನ್ ಹಾಗೂ ಇತರರು ಉಪಸ್ಥಿತರಿದ್ದರು.