ಚಿಕ್ಕಮಗಳೂರು : ಪ್ರಕೃತಿ ವಿಕೋಪವನ್ನು ತಡೆಗಟ್ಟುವ ನಿಟ್ಟಿನಲ್ಲಿ ಶಿಕ್ಷಕರು ಮಕ್ಕಳಿಗೆ ಪಠ್ಯದ ಜೊತೆಗೆ ಪರಿಸರದ ಪಾಠವನ್ನೂ ಮಾಡಬೇಕು ಎಂದು ಪಶ್ಚಿಮಘಟ್ಟ ಕಾರ್ಯಪಡೆಯ ಸದಸ್ಯ ಬಿ.ಎಂ.ಕುಮಾರಸ್ವಾಮಿ ಸಲಹೆ ಮಾಡಿದರು.
ನಗರದ ಮಲೆನಾಡು ವಿದ್ಯಾಸಂಸ್ಥೆಯಲ್ಲಿ ಶುಕ್ರವಾರ ಆಯೋಜಿಸಿದ್ದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮವನ್ನು ಉಧ್ಟಾಟಿಸಿ ಮಾತನಾಡಿದ ಅವರು ಶಿಕ್ಷಕರು ಮಕ್ಕಳಲ್ಲಿ ಪರಿಸರದ ಬಗ್ಗೆ ಕಾಳಜಿ ಮತ್ತು ಪ್ರೀತಿಯನ್ನು ಬೆಳೆಸಬೇಕು ಎಂದು ಕಿವಿಮಾತು ಹೇಳಿದರು.
ಇತ್ತೀಚಿನ ವರ್ಷಗಳಲ್ಲಿ ಭೂಮಿಯ ಮೇಲೆ ಹಿಂದೆಂದೂ ಕಂಡು ಕೇಳರಿಯದ ಅತಿವೃಷ್ಠಿ, ಅನಾವೃಷ್ಠಿ, ಭೂಕಂಪ, ಪ್ರಕೃತಿ ವಿಕೋಪ ಸಂಭವಿಸುತ್ತಿವೆ, ಕಾಲಕಾಲಕ್ಕೆ ಮಳೆಯಾಗುತ್ತಿಲ್ಲ, ಮೂರು ತಿಂಗಳ ಅವಧಿಯಲ್ಲಿ ಬೀಳಬೇಕಾದ ಮಳೆ ಕೇವಲ ಒಂದೇ ವಾರದಲ್ಲಿ ಸುರಿಯುತ್ತಿದೆ, ಭೂ ಸ್ಪೋಟ, ಜಲ ಸ್ಪೋಟ, ಗುಡ್ಡಕುಸಿತದಂತಹ ಅವಘಡಗಳು ಘಟಿಸುತ್ತಿವೆ, ಇವೆಲಕ್ಕೂ ಮೂಲ ಕಾರಣ ಪರಿಸರ ನಾಶವಾಗಿರುವುದು ಎಂದರು.
ದೇಶದಲ್ಲಿ ಕೈಗಾರಿಕಾ ಕ್ರಾಂತಿ ಆರಂಭವಾದ ನಂತರ ಸಾವಿರಾರು ಟನ್ಗಳಷ್ಟು ಕಾರ್ಬನ್ ಡೈ ಆಕ್ಸೈಡ್ನ್ನು ನಾವು ಪರಿಸರಕ್ಕೆ ಬಿಡುತ್ತಿದ್ದೇವೆ, ಮಿತಿಮೀರಿದ ಪೆಟ್ರೋಲ್, ಡೀಸೆಲ್ ಬಳಕೆಯಿಂದಾಗಿ ಭೂಮಿಯ ಉಷ್ಣಾಂಶ ದಿನೇದಿನೇ ಲಕ್ಷ್ಮಣರೇಖೆಯನ್ನು ದಾಟಿ ಹೆಚ್ಚುತ್ತಿದೆ, ಇದರ ಜೊತೆಗೆ ನಮ್ಮ ದುರಾಸೆಯಿಂದಾಗಿ ಅರಣ್ಯಗಳು, ನದಿಗಳು ನಾಶವಾಗುತ್ತಿವೆ ಎಂದು ವಿಷಾದಿಸಿದರು.
ಇದೆಲ್ಲದರಿಂದಾಗಿ ಪ್ರಕೃತಿ ವಿಕೋಪ ಅವಘಡಗಳು ಸಂಭವಿಸುತ್ತಿವೆ, ಪ್ರಪಂಚದಲ್ಲೇ ವಾಯು ಮಾಲಿನ್ಯ ಅತ್ಯಂತ ಕೆಟ್ಟ ಮಟ್ಟದಲ್ಲಿರುವ ದೇಶ ಭಾರತವಾಗಿದೆ, ಕುಡಿಯುವ ನೀರು ಮತ್ತು ಉಸಿರಾಡುವ ಶುದ್ದ ಗಾಳಿಯನ್ನು ದುಡ್ಡುಕೊಟ್ಟು ಕೊಂಡುಕೊಳ್ಳುವ ಹೀನಾಯ ಸ್ಥಿತಿಗೆ ನಾವು ಬಂದಿದ್ದೇವೆ ಎಂದರು.
ಕಳೆದ ವರ್ಷ ಕೊಡಗಿನಲ್ಲಿ ಜಲಸ್ಟೋಟ, ಪ್ರಕೃತಿ ವಿಕೋಪ ಸಂಭವಿಸಿತು, ತೋಟ, ಮನೆ, ಗದ್ದೆಗಳು ನಾಶವಾದವು, ಗುಡ್ಡಗಳು ಕುಸಿದವು, ಸಾವಿರಾರು ಜನ ಕೆಲವೇ ನಿಮಿಷಗಳಲ್ಲಿ ನಿರಾಶ್ರಿತರಾದÀರು, ಈ ವರ್ಷ ಅದು ಚಿಕ್ಕಮಗಳೂರು, ಹಾಸನ ಜಿಲ್ಲೆಗಳಿಗೂ ವ್ಯಾಪಿಸಿದೆ, ಈಗಲಾದರೂ ಎಚ್ಚೆತ್ತುಕೊಂಡು ಪರಿಸರವನ್ನು ಉಳಿಸದಿದ್ದರೆ ಅದು ಇಡೀ ರಾಜ್ಯಕ್ಕೆ ವ್ಯಾಪಿಸುತ್ತದೆ ಎಂದು ಎಚ್ಚರಿಸಿದರು.
ಪರಿಸರ ನಾಶ ಇದೇ ರೀತಿ ಮುಂದುವರೆದರೆ ಪಶ್ಚಿಮಘಟ್ಟಗಳ ಅರಣ್ಯಗಳು ಸಂಪೂರ್ಣ ನಾಶವಾಗುತ್ತವೆ ಎಂದ ಅವರು ಇದನ್ನು ಅರಿತು ನೀಲಗಿರಿ, ಅಕೇಷಿಯಾ ಬಿಟ್ಟು ನೈಸರ್ಗಿಕ ಅರಣ್ಯಗಳನ್ನು ಬೆಳೆಸಬೇಕು ಎಂದು ಹೇಳಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಸಂಸ್ಥೆಯ ಗೌರವ ಕಾರ್ಯದರ್ಶಿ ಡಾ|| ಡಿ.ಎಲ್.ವಿಜಯ್ಕುಮಾರ್ ಮಲೆನಾಡು ವಿದ್ಯಾಸಂಸ್ಥೆಯ ಸಂಸ್ಥಾಪಕರಾದ ಸಿಎಂಎಸ್ ಶಾಸ್ತ್ರಿ ಮತ್ತು ಸರಾಫ್ ರಾಮಚಂದ್ರರಾವ್ ಅವರ ಪುತ್ಥಳಿಯನ್ನು ಕಾಲೇಜಿನ ಆವರಣದಲ್ಲಿ ಸ್ಥಾಪಿಸಲಾಗುವುದು ಎಂದು ತಿಳಿಸಿದರು.
ಶಿಕ್ಷಕರ ದಿನಾಚರಣೆ ಅಂಗವಾಗಿ ನಿವೃತ್ತ ಶಿಕ್ಷಕರಾದ ಚಂದ್ರಶೇಖರ ಆರಾಧ್ಯ ಮತ್ತು ಪ್ರಕಾಶ್ ಅವರನ್ನು ಸಮಾರಂಭದಲ್ಲಿ ಸನ್ಮಾನಿಸಲಾಯಿತು, ಸಂಸ್ಥೆಯಲ್ಲಿ 25 ವರ್ಷಗಳಿಗೂ ಅಧಿಕಕಾಲ ಸೇವೆ ಸಲ್ಲಿಸಿದ ಶಿಕ್ಷಕರನ್ನು ಗೌರವಿಸಲಾಯಿತು.
ಸಂಸ್ಥೆಯ ಅಧ್ಯಕ್ಷ ಎನ್.ಕೇಶವಮೂರ್ತಿ ಅಧ್ಯಕ್ಷತೆ ವಹಿಸಿದ್ದರು, ಉಪಾಧ್ಯಕ್ಷ ಡಾ|| ಜೆ.ಪಿ.ಕೃಷ್ಣೇಗೌಡ, ಸಹಕಾರ್ಯದರ್ಶಿ ಎಸ್.ಶಂಕರನಾರಾಯಣ ಭಟ್, ನಿದೇರ್ಶಕಿ ಶ್ರೀದೇವಿ, ಆಡಳಿತಾಧಿಕಾರಿ ಶಾಂತಕುಮಾರಿ ಉಪಸ್ಥಿತರಿದ್ದರು.
Home ಸ್ಥಳಿಯ ಸುದ್ದಿ ಚಿಕ್ಕಮಗಳೂರು : ಪ್ರಕೃತಿ ವಿಕೋಪವನ್ನು ತಡೆಗಟ್ಟುವ ನಿಟ್ಟಿನಲ್ಲಿ ಶಿಕ್ಷಕರು ಮಕ್ಕಳಿಗೆ ಪಠ್ಯದ ಜೊತೆಗೆ ಪರಿಸರದ ಪಾಠವನ್ನೂ...










