ಚಿಕ್ಕಮಗಳೂರು : ಬ್ರಾಹ್ಮಣ ಲೇಖಕರೇ ಇದ್ದಂತಹ ಕಾಲದಲ್ಲಿ ಶೂದ್ರ ವರ್ಗದಿಂದ ಬಂದಂತಹ ಏಕೈಕ ಸಾಹಿತಿ ರಾಷ್ಟ್ರಕವಿ ಕುವೆಂಪು : ಡಾ|| ಬೆಳವಾಡಿ ಮಂಜುನಾಥ್.

227
firstsuddi

ಚಿಕ್ಕಮಗಳೂರು : ನವೋದಯದ ಸಂದರ್ಭದಲ್ಲಿ ಎಲ್ಲಾ ಬ್ರಾಹ್ಮಣ ಲೇಖಕರೇ ಇದ್ದಂತಹ ಕಾಲದಲ್ಲಿ ಶೂದ್ರ ವರ್ಗದಿಂದ ಬಂದಂತಹ ಏಕೈಕ ಸಾಹಿತಿ ರಾಷ್ಟ್ರಕವಿ ಕುವೆಂಪು ಎಂದು ಸಾಹಿತಿ ಡಾ|| ಬೆಳವಾಡಿ ಮಂಜುನಾಥ್ ಹೇಳಿದರು.
ರಾಷ್ಟ್ರಕವಿ ಕುವೆಂಪು ನಾಟಕೋತ್ಸವ ಸಮಿತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ನಗರದ ಕುವೆಂಪು ಕಲಾ ಮಂದಿರದಲ್ಲಿ ಭಾನುವಾರ ನಡೆದ ಕುವೆಂಪು ನಾಟಕೋತ್ಸವದ ಸಮಾರೋಪ ಸಮಾರಂಭದಲ್ಲಿ ಅವರು ಸಮಾರೋಪ ನುಡಿಗಳನ್ನಾಡಿದರು.
ಆ ಕಾಲದ ಎಲ್ಲಾ ಸವಾಲುಗಳನ್ನೂ ಎದುರಿಸುತ್ತಾ ಸಾಹಿತ್ಯ ರಚನೆಯನ್ನು ಮತ್ತು ಸಂಸ್ಕೃತ ಕಲಿಕೆಯನ್ನು ಸವಾಲಾಗಿ ಕಂಡು ಯಶಸ್ವಿಯಾದವರು ಕುವೆಂಪು, ಅವರ ನಾಟಕಗಳು ಅವರೇ ಹೇಳಿರುವಂತೆ ವೇದಿಕೆಗಳಿಗಾಗಿ ರಚಿಸಿರುವ ನಾಟಕಗಳಲ್ಲ ಅವೆಲ್ಲವೂ ದೃಶ್ಯ ಕಾವ್ಯಗಳು, ಅವುಗಳಲ್ಲಿ ವೈಚಾರಿಕತೆ, ಮಾನವೀಯ ಮೌಲ್ಯಗಳು, ಸಮಾಜವನ್ನು ತಿದ್ದುವ ತುಡಿತವಿದೆ ಎಂದರು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಜಿ.ಪಂ. ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷ ಹಿರಿಗಯ್ಯ ವೈಜ್ಞಾನಿಕವಾಗಿ ನಾವು ಮುಂದುವರೆಯಬೇಕು ಆದರೆ ಅದರ ನಡುವೆ ನಮ್ಮ ತನವನ್ನು ನಾವು ಉಳಿಸಿಕೊಳ್ಳಬೇಕು ಆಧುನಿಕತೆಯ ನಾಗಾಲೋಟದಲ್ಲಿ ನಮ್ಮ ಧರ್ಮ, ಸಂಸ್ಕೃತಿ ಮತ್ತು ಸಂಸ್ಕಾರವನ್ನು ಬಿಡಬಾರದು, ಪೂರ್ವಜರು ಹಾಕಿಕೊಟ್ಟ ಹಾದಿಯಲ್ಲಿ ನಾವು ಸಾಗಬೇಕು ಎಂದು ಕಿವಿಮಾತು ಹೇಳಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ರಾಷ್ಟ್ರಕವಿ ಕುವೆಂಪು ನಾಟಕೋತ್ಸವ ಸಮಿತಿಯ ಅಧ್ಯಕ್ಷ ಡಾ|| ಜೆ.ಪಿ.ಕೃಷ್ಣೇಗೌಡ ಪೇಜಾವರ ಮಠಾಧೀಶರ ನಿಧನದ ಹಿನ್ನೆಲೆಯಲ್ಲಿ ರದ್ದುಗೊಳಿಸಲಾಗಿದ್ದ ನಾಟಕ ಪ್ರದರ್ಶನವನ್ನು ಕಲಾವಿದರಿಗೆ ಮತ್ತು ಪ್ರೇಕ್ಷಕರಿಗೆ ನಿರಾಶೆಯಾಗಬಾರದು ಎಂಬ ಉದ್ದೇಶದಿಂದ ಮತ್ತೆ ಆಯೋಜಿಸಲಾಗಿದೆ ಎಂದು ತಿಳಿಸಿದರು.
ನಾಟಕೋತ್ಸವದ ಯಶಸ್ಸಿಗೆ ಸಹಕರಿಸಿದವರಿಗೆ ಕೃತಜ್ಞತೆ ಸಲ್ಲಿಸಿದರು, ನಾಟಕದ ಪ್ರದರ್ಶನಕ್ಕೆ ಮರು ಅವಕಾಶ ಕಲ್ಪಿಸಿಕೊಟ್ಟ ಹಿನ್ನೆಲೆಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಡಾ|| ಸಿ.ರಮೇಶ್ ಮತ್ತು ಡಾ|| ಜೆ.ಪಿ.ಕೃಷ್ಣೇಗೌಡ ಅವರನ್ನು ಸಮಾರಂಭದಲ್ಲಿ ಸನ್ಮಾನಿಸಲಾಯಿತು.
ಸಮಾರೋಪದ ನಂತರ ಐಡಿಎಸ್‍ಜಿ ಕಾಲೇಜಿನ ವಿದ್ಯಾರ್ಥಿಗಳಿಂದ ಕುವೆಂಪು ವಿರಚಿತ ಯಮನ ಸೋಲು ನಾಟಕದ ಪ್ರದರ್ಶನ ನಡೆಯಿತು, ಶ್ರೀ ಗುರು ಪಂಚಾಕ್ಷರಿ ಸಂಗೀತ ಬಳಗದಿಂದ ಕುವೆಂಪು ವಿರಚಿತ ಗೀತೆಗಳ ಗಾಯನ ನಡೆಯಿತು.
ಜಿಲ್ಲಾ ಕಸಾಪ ಅಧ್ಯಕ್ಷ ಕುಂದೂರು ಅಶೋಕ್, ಶರಣ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ರವೀಶ್ ಕ್ಯಾತನಬೀಡು, ಸಾಂಸ್ಕøತಿಕ ಸಂಘದ ಅಧ್ಯಕ್ಷ ಗಿರಿಧರ್ ಯತೀಶ್, ಐ.ಡಿ.ಎಸ್.ಜಿ ಕಾಲೇಜಿನ ಪ್ರಾಚಾರ್ಯ ಡಾ|| ಎಸ್.ಎ.ನಟರಾಜ್ ಉಪಸ್ಥಿತರಿದ್ದರು.
ಜಿಲ್ಲಾ ಕಸಾಪ ಸಂಘಟನಾ ಕಾರ್ಯದರ್ಶಿ ಕೆ.ಚಂದ್ರಯ್ಯ ಕಾರ್ಯಕ್ರಮವನ್ನು ನಿರೂಪಿಸಿದರು, ಉಪನ್ಯಾಸಕ ವೈ.ಜಿ.ಸಂಪತ್ ಕುಮಾರ್ ಸ್ವಾಗತಿಸಿದರು, ಕಸಾಪ ಕಾರ್ಯದರ್ಶಿ ಡಿ.ಎಂ.ಮಂಜುನಾಥ ಸ್ವಾಮಿ ವಂದಿಸಿದರು.