ಚಿಕ್ಕಮಗಳೂರು : ಮಳೆಗಾಗಿ ಪ್ರಾರ್ಥಿಸಿ ವಾಸವಿ ಸೇವಾ ಟ್ರಸ್ಟ್ ವತಿಯಿಂದ ಪರ್ಜನ್ಯ ಜಪ ಹಾಗೂ ಪರ್ಜನ್ಯ ಹೋಮ ನಡೆಸಲಾಯಿತು…

258
firstsuddi

ಚಿಕ್ಕಮಗಳೂರು : ನಗರದ ಬೈಪಾಸ್ ರಸ್ತೆಯ ವಾಸವಿ ಮಂದಿರದಲ್ಲಿ ಮಳೆಗಾಗಿ ಪ್ರಾರ್ಥಿಸಿ ವಾಸವಿ ಸೇವಾ ಟ್ರಸ್ಟ್ ವತಿಯಿಂದ ಸೋಮವಾರ ಪರ್ಜನ್ಯ ಜಪ, ಪರ್ಜನ್ಯ ಹೋಮ ನಡೆಸಲಾಯಿತು.
ಕೂದುವಳ್ಳಿಯ ವಿಶ್ವನಾಥ ಭಟ್ಟರು ಮತ್ತು ಅಂಬಳೆಯ ಕೃಷ್ಣಭಟ್ಟರ ನೇತೃತ್ವದ ಅರ್ಚಕರ ತಂಡ ಬೆಳಿಗ್ಗೆ ಮಳೆಗಾಗಿ ಪ್ರಾರ್ಥಿಸಿ ಸಾಮೂಹಿಕವಾಗಿ ಪರ್ಜನ್ಯ ಜಪವನ್ನು ನಡೆಸಿತು.
ನಂತರ ಶ್ರೀ ವಾಸವಿ ಮಾತೆಗೆ ಅಭಿಷೇಕ, ವಿಶೇಷ ಪೂಜೆ, ಅಲಂಕಾರ, ದೇವಾಲಯದಲ್ಲಿ ಗಣಪತಿ, ನವಗ್ರಹ, ರುದ್ರಹೋಮ ಮತ್ತು ಪರ್ಜನ್ಯ ಹೋಮ ನೆರವೇರಿತು.
ಹೋಮದ ಪೂರ್ಣಾಹುತಿಯ ನಂತರ ಟ್ರಸ್ಟಿನ ಪದಾಧಿಕಾರಿಗಳು ಮತ್ತು ಆರ್ಯವೈಶ್ಯ ಸಮುದಾಯದವರು ಮಳೆ, ಬೆಳೆ ಮತ್ತು ಸಮೃದ್ದಿ ಕರುಣಿಸುವಂತೆ ಸಾಮೂಹಿವಾಗಿ ಪ್ರಾರ್ಥನೆ ಸಲ್ಲಿಸಿದರು. ಸಾರ್ವಜನಿಕ ಅನ್ನಸಂತರ್ಪಣೆ ಜರುಗಿತು.
ಇದೇ ವೇಳೆ ಮಾಧ್ಯಮದೊಂದಿಗೆ ಮಾತನಾಡಿದ ವಾಸವಿ ಸೇವಾ ಟ್ರಸ್ಟ್ ನ ಕಾರ್ಯಾಧ್ಯಕ್ಷ ಪಿ.ಎಸ್.ಶ್ರೀಧರ್ ಮುಂಗಾರು ಸಂಪೂರ್ಣ ವಿಫಲವಾಗಿ ಬರದ ಛಾಯೆ ಆವರಿಸುತ್ತಿರುವ ಹಿನ್ನೆಲೆಯಲ್ಲಿ ಮಳೆ, ಬೆಳೆ, ಸಮೃದ್ದಿಯಾಗಿ ಲೋಕಕಲ್ಯಾಣವಾಗುವಂತೆ ಸಂಕಲ್ಪಿಸಿ ಈ ಧಾರ್ಮಿಕ ವಿಧಿವಿಧಾನಗಳನ್ನು ನಡೆಸಲಾಗುತ್ತಿದೆ ಎಂದು ತಿಳಿಸಿದರು.
ವಾಸವಿ ಸೇವಾ ಟ್ರಸ್ಟ್ ನ ಗೌರವಾಧ್ಯಕ್ಷ ಎಸ್.ಎನ್.ರಾಮಣ್ಣ, ಕಾರ್ಯದರ್ಶಿ ಬಿ.ಎಂ.ವಿಶ್ವನಾಥ್, ಖಜಾಂಚಿ ಸುಧೀರ್, ಮಾಜಿ ಅಧ್ಯಕ್ಷ ಎನ್.ಬದರಿನಾಥ್, ಟ್ರಸ್ಟಿಗಳಾದ ಕೆ.ಎಸ್.ಸತೀಶ್, ಬಿ.ಎಸ್.ಸತೀಶ್, ದಿನೇಶ್ ಹಾಜರಿದ್ದರು.