ಚಿಕ್ಕಮಗಳೂರು : ಲಯನ್ಸ್ ಕ್ಲಬ್ ಪದಾಧಿಕಾರಿಗಳು ಮತ್ತು ಸದಸ್ಯರು ಸಮಾಜ ಸೇವೆಗೆ ಮೊದಲ ಆದ್ಯತೆ ನೀಡಬೇಕು : ಎಂ.ಪಿ.ಸನ್ನಿ.

221
firstsuddi

ಚಿಕ್ಕಮಗಳೂರು : ಲಯನ್ಸ್ ಕ್ಲಬ್ ಪದಾಧಿಕಾರಿಗಳು ಮತ್ತು ಸದಸ್ಯರು ಸಮಾಜ ಸೇವೆಗೆ ಮೊದಲ ಆದ್ಯತೆ ನೀಡಬೇಕು ಎಂದು ಲಯನ್ಸ್ ಪ್ರಾಂತೀಯ ಅಧ್ಯಕ್ಷ ಎಂ.ಪಿ.ಸನ್ನಿ ಸಲಹೆ ಮಾಡಿದರು.
ನಗರದ ಲಯನ್ಸ್ ಸೇವಾ ಭವನದಲ್ಲಿ ನಡೆದ ವಲಯಾಧ್ಯಕ್ಷರು ಮತ್ತು ಪ್ರಾಂತೀಯ ಅಧ್ಯಕ್ಷರ ಅಧಿಕೃತ ಭೇಟಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಹಣ, ಅಧಿಕಾರ, ಆಸ್ತಿ, ಅಂತಸ್ತು ಮನುಷ್ಯನಿಗೆ ಸಮಾಜದಲ್ಲಿ ಗೌರವ ತಂದು ಕೊಡುತ್ತದೆ ಆದರೆ ಸಮಾಜ ಸೇವೆ ಆತನ ಬದುಕನ್ನು ಸಾರ್ಥಕಗೊಳಿಸುತ್ತದೆ, ಅಶಕ್ತರು, ಅಸಹಾಯಕರ ಸೇವೆ ಮಾಡುವುದರಿಂದ ಮನಸ್ಸಿಗೆ ಶಾಂತಿ, ನೆಮ್ಮದಿ ದೊರೆಯುತ್ತದೆ ಎಂದರು.
ಲಯನ್ಸ್ ವಲಯಾಧ್ಯಕ್ಷ ಜೆ.ಎನ್.ಜೆ ಲೋಬೋ ಮಾತನಾಡಿ ಲಯನ್ಸ್ ಸಂಸ್ಥೆ ಹುಟ್ಟಿದ್ದೇ ಮನುಕುಲದ ಸೇವೆಗಾಗಿ ಅದರ ಮೂಲ ಉದ್ದೇಶ ಮತ್ತು ಗುರಿ ಸಹ ಸೇವೆ ಮಾಡುವುದೇ ಆಗಿದೆ ಹಾಗಾಗಿ ಕ್ಲಬ್‍ನ ಸದಸ್ಯರು ಸೇವಾವ್ರತಿಗಳಾಗಬೇಕು ಎಂದು ಕಿವಿಮಾತು ಹೇಳಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಲಯನ್ಸ್ ಅಧ್ಯಕ್ಷ ಸಿ.ಪಿ.ಸುರೇಶ್ ಸಂಸ್ಥೆ ನಡೆದು ಬಂದ ಹಾದಿ ಮತ್ತು ಅದರ ಸೇವಾ ಚಟುವಟಿಕೆಗಳನ್ನು ವಿವರಿಸಿದರು.
ಇಂಡಿಯನ್ ಸೋಷಿಯಲ್ ಟೆಕ್ನಿಕಲ್ ಎಜುಕೇಷನ್ ಸಂಸ್ಥೆಯ ಕಾರ್ಯಕಾರಿಣಿ ಮಂಡಳಿಗೆ ಸದಸ್ಯರಾಗಿ ಆಯ್ಕೆಯಾದ ಹಿನ್ನೆಲೆಯಲ್ಲಿ ಆದಿಚುಂಚನಗಿರಿ ವಿಶ್ವವಿದ್ಯಾಲಯದ ಕುಲಸಚಿವ ಡಾ|| ಸಿ.ಕೆ.ಸುಬ್ರಾಯ ಅವರನ್ನು ಸಮಾರಂಭದಲ್ಲಿ ಸನ್ಮಾನಿಸಲಾಯಿತು.
ನರಿಗುಡ್ಡನಹಳ್ಳಿಯ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗೆ ಲಯನ್ಸ್ ವತಿಯಿಂದ ಕುರ್ಚಿಗಳನ್ನು ಕೊಡುಗೆಯಾಗಿ ನೀಡಲಾಯಿತು.
ಲಯನ್ಸ್ ಜಿಲ್ಲಾ ಮಾಜಿ ರಾಜ್ಯಪಾಲ ಹೆಚ್.ಆರ್.ಹರೀಶ್, ಕಾರ್ಯದರ್ಶಿ ಮನೋಜ್ ಬಸವರಾಜ್, ಖಜಾಂಚಿ ಜಯರಾಮೇಗೌಡ, ಮೂಡಿಗೆರೆ ಅಧ್ಯಕ್ಷ ಲಕ್ಷ್ಮಣಗೌಡ, ಆಶಾಕಿರಣ ಅಂಧಮಕ್ಕಳ ಶಾಲೆಯ ಅಧ್ಯಕ್ಷ ಡಾ|| ಜೆ.ಪಿ.ಕೃಷ್ಣೇಗೌಡ, ಪ್ರೊ|| ಹೆಚ್.ಎಸ್.ಜಗದೀಶಪ್ಪ ಉಪಸ್ಥಿತರಿದ್ದರು.