ಚಿಕ್ಕಮಗಳೂರು : ಎನ್.ಆರ್.ಪುರ ತಾಲ್ಲೂಕಿನ ನಾಗರಮಕ್ಕಿ ಗ್ರಾಮದಲ್ಲಿ ಪ್ರಭಾವಿ ವ್ಯಕ್ತಿಗಳು ಮಾಡಿರುವ ಸರ್ಕಾರಿ ಶಾಲೆಯ ಜಾಗದ ಒತ್ತುವರಿಯನ್ನು ತೆರವುಗೊಳಿಸುವಂತೆ ಕರ್ನಾಟಕ ದಲಿತ ಸಂಘರ್ಷ ಸಮಿತಿ ಜಿಲ್ಲಾಡಳಿತವನ್ನು ಒತ್ತಾಯಿಸಿದೆ. ಅಪರ ಜಿಲ್ಲಾಧಿಕಾರಿ ಬಿ.ಆರ್.ರೂಪ ಅವರನ್ನು ನಿನ್ನೆ ಭೇಟಿ ಮಾಡಿದ ಸಮಿತಿಯ ಪದಾಧಿಕಾರಿಗಳು ಈ ಸಂಬಂಧ ಮನವಿ ಸಲ್ಲಿಸಿದರು.
ನಾಗರಮಕ್ಕಿ ಗ್ರಾಮದ ಹರಿಜನ ಕಾಲೋನಿಗೆ 1981 ರಲ್ಲಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯನ್ನು ರಾಜ್ಯ ಸರ್ಕಾರ ಮಂಜೂರು ಮಾಡಿದ್ದು ಅಂದಿನಿಂದ ಇಲ್ಲಿಯವರೆಗೆ ಆ ಶಾಲೆಯಲ್ಲಿ ಕಾಲೋನಿಯ ನೂರಾರು ಪರಿಶಿಷ್ಟ ಮಕ್ಕಳು ಒಂದರಿಂದ ಐದನೇ ತರಗತಿವರೆಗೆ ವ್ಯಾಸಂಗ ಮಾಡಿದ್ದಾರೆ ಈಗಲೂ 50 ರಿಂದ 60 ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ ಎಂದು ತಿಳಿಸಿದರು.
ಇತ್ತೀಚೆಗೆ ಶಾಲೆಗೆ ರಜೆ ಇದ್ದ ಸಂದರ್ಭದಲ್ಲಿ ಗ್ರಾಮದ ಮೇಲ್ಜಾತಿಯ ಮೂವರು ಶಾಲೆಯ ಕಾಂಪೌಂಡ್ ಮತ್ತು ಆಟದ ಮೈದಾನವನ್ನು ಅಕ್ರಮವಾಗಿ ಒತ್ತುವರಿ ಮಾಡಿ ತಂತಿಬೇಲಿ ಹಾಕಿದ್ದಾರೆ ಇದರಿಂದ ವಿದ್ಯಾರ್ಥಿಗಳು ಶಾಲೆಗೆ ಹೋಗಲು ದಾರಿಯಿಲ್ಲದೆ ಪರದಾಡುವಂತಾಗಿದೆ ಎಂದು ಅಳಲು ತೋಡಿಕೊಂಡರು.
ತಕ್ಷಣ ಒತ್ತುವರಿಯನ್ನು ತೆರವುಗೊಳಿಸಿ ವಿದ್ಯಾರ್ಥಿಗಳ ಕಲಿಕೆಗೆ ಅವಕಾಶ ಕಲ್ಪಿಸಬೇಕೆಂದು ಆಗ್ರಹಿಸಿದ ಪದಾಧಿಕಾರಿಗಳು ಬೇಡಿಕೆಗೆ ಸ್ಪಂದಿಸದಿದ್ದಲ್ಲಿ ಸಂಬಂಧಪಟ್ಟ ಇಲಾಖೆಯ ಎದುರು ಧರಣಿ ಹಮ್ಮಿಕೊಳ್ಳುವ ಎಚ್ಚರಿಕೆ ನೀಡಿದರು.
ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಘಟನಾ ಸಂಚಾಲಕರಾದ ಡಿ.ರಾಮು, ಮಹೇಂದ್ರಸ್ವಾಮಿ, ಶೃಂಗೇರಿ ಕ್ಷೇತ್ರ ಪ್ರಧಾನ ಸಂಚಾಲಕ ಎಸ್.ಹನುಮಂತ, ಗ್ರಾಮ ಸಂಚಾಲಕರಾದ ವಾಸಂತಿ ಪ್ರೇಮ ಪ್ರಜ್ಞಾ .ವಾಲ್ಮೀಕಿ ಸಂಘದ ಜಿಲ್ಲಾ ಕಾರ್ಯದರ್ಶಿ ನಾಗರಾಜ ಹಾಜರಿದ್ದರು.










