ಚುನಾವಣೆ ವ್ಯವಸ್ಥೆಯನ್ನೇ ಬುಡಮೇಲು ಮಾಡಿದ್ದ ದ್ರೋಹಿ ಕೇಜ್ರಿವಾಲ್: ಸಂಸದ ಗೋವಿಂದ ಕಾರಜೋಳ ಕಿಡಿ.

32

ವಿಜಯಪುರ: ಉಚಿತ ಯೋಜನೆ, ಸುಳ್ಳು ಆಶ್ವಾಸನೆಗಳ ಮೂಲಕ ಬಡ ಜನರ ವೋಟ್ ಕದ್ದು, ಅರವಿಂದ್ ಕೇಜ್ರಿವಾಲ್ ಚುನಾವಣಾ ವ್ಯವಸ್ಥೆಯನ್ನೇ ಬುಡಮೇಲು ಮಾಡುತ್ತಿದ್ದ ದ್ರೋಹಿ ಎಂದು ಬಿಜೆಪಿ ಸಂಸದ ಗೋವಿಂದ ಕಾರಜೋಳ ಆಕ್ರೋಶ ವ್ಯಕ್ತಪಟಿಸಿದ್ದಾರೆ. ದೆಹಲಿ ವಿಧಾನಸಭೆ ಚುನಾವಣೆಯಲ್ಲಿ ಆಡಳಿತಾರೂಢ ಎಎಪಿ ಸೋಲಿನ ರುಚಿ ಕಂಡಿದ್ದು, ಬರೊಬ್ಬರಿ 26 ವರ್ಷಗಳ ನಂತರ ಬಿಜೆಪಿ ದೆಹಲಿ ಆಡಳಿತ ಚುಕ್ಕಾಣಿ ಹಿಡಿಯುತ್ತಿದೆ. ದೆಹಲಿ ಚುನಾವಣಾ ಫಲಿತಾಂಶದ ಕುರಿತು ವಿಜಯಪುರದಲ್ಲಿ ಮಾತನಾಡಿದ ಸಂಸದ ಗೋವಿಂದ ಕಾರಜೋಳ, ಉಚಿತ ಯೋಜನೆ, ಸುಳ್ಳು ಆಶ್ವಾಸನೆಗಳ ಮೂಲಕ ಬಡ ಜನರ ವೋಟು ಕದ್ದು, ಚುನಾವಣೆ ವ್ಯವಸ್ಥೆಯನ್ನೇ ಬುಡಮೇಲು ಮಾಡುತ್ತಿದ್ದ ದ್ರೋಹಿ ಅರವಿಂದ ಕೇಜ್ರಿವಾಲ್‍ಗೆ ದೆಹಲಿ ಮತದಾರರು ಹೀನಾಯ ಸೋಲು ಉಣಿಸಿದ್ದಾರೆ ಎಂದು ಹೇಳಿದರು. ಅಂತೆಯೇ ಹತ್ತು ವರ್ಷಗಳ ಕಾಲ ಕೇಜ್ರಿವಾಲ್ ಅವರು ದೆಹಲಿಯಲ್ಲಿ ದುರಾಡಳಿತ ನಡೆಸಿದ್ದರು. ಜೈಲಿಗೆ ಹೋದರೂ ಲಜ್ಜೆಗೆಟ್ಟು ಆಡಳಿತ ನಡೆಸಿದ್ದ ಸಂವಿಧಾನ ದ್ರೋಹಿ ಎಂದು ಆರೋಪಿಸಿದರು. ದೆಹಲಿ ಎಂಬುದು ಒಂದು ಬೃಹತ್ ಮಹಾನಗರ ಪಾಲಿಕೆ ಆಡಳಿತ ಇದ್ದಂತೆ. ಬೇರೆ ರಾಜ್ಯಗಳಿಗೆ ಇರುವಂತೆ ಹೆಚ್ಚಿನ ಜವಾಬ್ದಾರಿ ಇಲ್ಲದ ಸರ್ಕಾರವಾಗಿದೆ. ಅತೀ ಹೆಚ್ಚು ಆದಾಯ ಸಂಗ್ರಹವಾಗುವ ದೆಹಲಿಯಲ್ಲಿ ಸರ್ಕಾರದ ಖಜಾನೆಯನ್ನು ಲೂಟಿ ಹೊಡೆದ ದೇಶ ಕಂಡ ಹೀನಮನಸ್ಸಿನ ರಾಜಕಾರಣಿಯಾಗಿದ್ದರು. ದೇಶಕ್ಕೆ ಕೆಟ್ಟ ಚುನಾವಣಾ ಮಾದರಿಯನ್ನು ಹಾಕಿ, ಉಚಿತ ಯೋಜನೆಗಳ ಮೂಲಕ ದೆಹಲಿ, ಪಂಜಾಬ್ ಗೆಲುವು ಸಾಧಿಸಿದ್ದರು ಎಂದು ಗೋವಿಂದ ಕಾರಜೋಳ ಕಿಡಿಕಾರಿದರು.