ಹೈದಾರಾಬಾದ್ : ಆಡಳಿತರೂಢ ತೆಲಂಗಾಣ ರಾಷ್ಟ್ರ ಸಮಿತಿ (ಟಿಆರ್ ಎಸ್) ಪಕ್ಷದ ಶಾಸಕರನ್ನು ಖರೀದಿಸಲು ಯತ್ನಿಸಿದ ಆರೋಪದ ಮೇಲೆ ಹಣದ ಸಮೇತ ನಾಲ್ವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಬಿಜೆಪಿ ಸುಮಾರು 100 ಕೋಟಿ ರೂಪಾಯಿ ಹಣದ ಆಮಿಷವೊಡ್ಡುವ ಮೂಲಕ ಶಾಸಕರನ್ನು ಪಕ್ಷ ತೊರೆಯುವಂತೆ ಮನವೊಲಿಸಲು ಪ್ರಯತ್ನಿಸಿರುವ ಬಗ್ಗೆ ವರದಿಯಾಗಿದೆ.
ಹರಿಯಾಣದ ಫರೀದಾಬಾದ್ ನಲ್ಲಿ ಅರ್ಚಕರಾಗಿರುವ ಸತೀಶ್ ಶರ್ಮಾ (33), ತಿರುಪತಿಯಲ್ಲಿ ಮಠವೊಂದರ ಪೀಠಾಧಿಪತಿ ಡಿ.ಸಿಂಹಯಾಜಿ (45), ಸ್ವಾಮೀಜಿಯ ಭಕ್ತರಾದ ರೋಹಿತ್ ರೆಡ್ಡಿ ಹಾಗೂ ಸರೂರ್ ನಗರದ ಉದ್ಯಮಿ ನಂದಕುಮಾರ್ (48) ಬಂಧಿತರು.
ನಿನ್ನೆ ರಾತ್ರಿ ಸೈಬರಾಬಾದ್ ಪೊಲೀಸ್ ವ್ಯಾಪ್ತಿಯ ಅಜೀಜ್ ನಗರದ ಫಾರ್ಮ್‌ಹೌಸ್ ವೊಂದರಲ್ಲಿ ಟಿಆರ್ ಎಸ್ ನ ನಾಲ್ವರು ಶಾಸಕರು ಪತ್ತೆಯಾದರು. ಚುನಾವಣೆ ಹಿನ್ನೆಲೆಯಲ್ಲಿ ಫಾರ್ಮ್‌ಹೌಸ್ ನಲ್ಲಿ ಅಕ್ರಮ ಚಟುವಟಿಕೆಗಳು ನಡೆಯುತ್ತಿರುವ ಬಗ್ಗೆ ದೂರು ಬಂದ ಬೆನ್ನಲ್ಲೇ ಪೊಲೀಸರು ಶೋಧ ಕಾರ್ಯ ನಡೆಸಿದ್ದು, ನಾಲ್ವರು ವ್ಯಕ್ತಿಗಳನ್ನು ವಶಕ್ಕೆ ಪಡೆದಿರುವುದಾಗಿ ಪೊಲೀಸ್ ಕಮಿಷನರ್ ಸ್ಟೀಫೆನ್ ರವೀಂದ್ರ ತಿಳಿಸಿದ್ದಾರೆ.










