ಟ್ರಾಫಿಕ್‍ನಲ್ಲಿ ಕಾರು ಸಿಲುಕಿ ಪರದಾಟ – 3 ಕಿ.ಮೀ ಓಡಿ ರೋಗಿಯ ಜೀವ ಉಳಿಸಿದ ವೈದ್ಯ!

61
firstsuddi

ಬೆಂಗಳೂರು : ವೈದ್ಯರೊಬ್ಬರು ಸಕಾಲಕ್ಕೆ ರೋಗಿಗೆ ಚಿಕಿತ್ಸೆ ಸಿಗಬೇಕು ಎಂದು ಟ್ರಾಫಿಕ್ ನಲ್ಲಿ ಸಿಲುಕಿದ್ದ ಕಾರನ್ನು ಅಲ್ಲೇ ಬಿಟ್ಟು 3 ಕಿ.ಮೀ ಓಡಿಕೊಂಡು ಆಸ್ಪತ್ರೆಗೆ ತೆರಳಿ ರೋಗಿಗೆ ಶಸ್ತ್ರಚಿಕಿತ್ಸೆ ನೀಡಿ ಮಾನವೀಯತೆ ಮೆರೆದಿದ್ದಾರೆ. ಆಗಸ್ಟ್ 30 ರಂದು ಈ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

ವೈದ್ಯ ಗೋವಿಂದ ನಂದಕುಮಾರ್ ಎಂಬುವವರು ಸರ್ಜಾಪುರ ರಸ್ತೆಯ ಮಣಿಪಾಲ್ ಆಸ್ಪತ್ರೆಯಲ್ಲಿ ಸರ್ಜನ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಆಗಸ್ಟ್ 30 ರಂದು ರೋಗಿಯೊಬ್ಬರಿಗೆ ತುರ್ತು ಲ್ಯಾಪ್ರೋಸ್ಕೋಪಿಕ್ ಗಾಲ್ ಬ್ಲಾಡರ್ ಶಸ್ತ್ರಚಿಕಿತ್ಸೆ ನಡೆಸಬೇಕಿತ್ತು. ಅಂದು ವಿಪರೀತ ಮಳೆಯಾಗಿತ್ತು. ಪರಿಣಾಮ ಮಾರತಹಳ್ಳಿ ಮತ್ತು ಸರ್ಜಾಪುರದ ರಸ್ತೆ ಕಂಪ್ಲೀಟ್ ಜಾಮ್ ಆಗಿತ್ತು. ಬೆಳ್ಳಗ್ಗೆ 10 ಗಂಟೆಗೆ ಶಸ್ತ್ರಚಿಕಿತ್ಸೆ ನಿಗದಿಯಾಗಿತ್ತು. ಟ್ರಾಫಿಕ್ ಇದ್ದ ಪರಿಣಾಮ ಆಸ್ಪತ್ರೆ ತಲುಪಲು 1 ಗಂಟೆ ಸಮಯ ಬೇಕಾಗಿತ್ತು. ಹೀಗಾಗಿ ವೈದ್ಯರು ಟ್ರಾಫಿಕ್ ನಲ್ಲೇ ಇಳಿದು ಆಸ್ಪತ್ರೆಗೆ 3 ಕಿ.ಮೀ. ಓಡಿಕೊಂಡು ಹೋಗಿದ್ದಾರೆ. ನಿಗದಿತ ಸಮಯಕ್ಕೆ ತಲುಪಿ ಯಶಸ್ವಿಯಾಗಿ ಶಸ್ತ್ರಚಿಕಿತ್ಸೆಯನ್ನೂ ನೆರವೇರಿಸಿದ್ದಾರೆ.

ಈ ಕುರಿತು ಮಾತನಾಡಿದ ಡಾ. ಗೋವಿಂದ ನಂದಕುಮಾರ್ ನಾನು ಟ್ರಾಫಿಕ್ ನಲ್ಲಿ ಸಿಲುಕಿಕೊಂಡಿದ್ದೆ. ಜೊತೆಗೆ ಶಸ್ತ್ರ ಚಿಕಿತ್ಸೆಗೆ ತಡವಾಯಿತಲ್ಲವೆಂದು ನಾನು ಹೆದರಲು ಪ್ರಾರಂಭಿಸಿದೆ. ಗೂಗಲ್ ಮ್ಯಾಪ್ ಹಾಕಿದ್ದರೂ, ಕಾರಿನಲ್ಲಿ ಹೋದರೆ ಅದು 45 ನಿಮಿಷ ಬೇಕು ಎಂದು ತೋರಿಸುತ್ತಿತ್ತು. ಹಾಗಾಗಿ ನಾನು ಓಡಿಕೊಂಡು ಆಸ್ಪತ್ರೆ ತಲುಪಿದೆ. ನನ್ನ ಕಾರು ಚಾಲಕ ಇದ್ದುದರಿಂದ ನಾನು ಕಾರು ಬಿಟ್ಟು ಬರಲು ಸಾಧ್ಯವಾಯಿತು. ಜೊತೆಗೆ ನಾನು ನಿಯಮಿತವಾಗಿ ಜಿಮ್ ಮಾಡುತ್ತಿದ್ದರಿಂದ ಓಡಲು ಸುಲಭವಾಯಿತು. ನಾನು ಆಸ್ಪತ್ರೆಗೆ 3 ಕಿ,ಮೀ ಓಡಿ ಸರಿಯಾದ ಸಮಯಕ್ಕೆ ಶಸ್ತ್ರ ಚಿಕಿತ್ಸೆಗೆ ಹಾಜರಾದೆ ಎಂದು ಹೇಳಿದರು. ಇದೀಗ ವೈದ್ಯರ ಈ ನಡೆಗೆ ಸೋಶಿಯಲ್ ಮೀಡಿಯಾದಲ್ಲಿ ಬಾರೀ ಮೆಚ್ಚುಗೆ ವ್ಯಕ್ತವಾಗುತ್ತಿದೆ.