ತಿರುಪತಿ : ಆಕ್ಸಿಜನ್ ಕೊರತೆಯಿಂದಾಗಿ 11 ಕೊರೊನಾ ಸೋಂಕಿತರು ಸಾವು…

93
firstsuddi

ತಿರುಪತಿ : ಆಕ್ಸಿಜನ್ ಕೊರತೆಯಿಂದಾಗಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 11 ಮಂದಿ ಸೋಂಕಿತರು ಸಾವನ್ನಪ್ಪಿರುವ ಘಟನೆ ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯ ಸರ್ಕಾರಿ ಶ್ರೀ ವೆಂಕಟೇಶ್ವರ ರಾಮನಾರಾಯಣ್ ರುಯಿಯಾ ಆಸ್ಪತ್ರೆಯಲ್ಲಿ ನಡೆದಿದೆ.

ರುಯಿಯಾ ಆಸ್ಪತ್ರೆಯಲ್ಲಿ ರೋಗಿಗಳು ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ನಿನ್ನೆ ರಾತ್ರಿ ಏಕಾಏಕಿ ರೋಗಿಗಳಲ್ಲಿ ಉಸಿರಾಟದ ಸಮಸ್ಯೆ ಕಾಣಿಸಿಕೊಂಡಿತ್ತು. ಈ ವೇಳೆ ಆಸ್ಪತ್ರೆಯಲ್ಲಿ ಆಕ್ಸಿಜನ್ ಕೊರತೆ ಕಂಡುಬಂದಿದೆ. ತಮಿಳುನಾಡಿನ ಶ್ರೀಪೆರುಂಬುದೂರ್ ಆಕ್ಸಿಜನ್ ಪ್ಲಾಂಟ್ ನಿಂದ ರುಯಿಯಾಗೆ ಆಮ್ಲಜನಕ ಟ್ಯಾಂಕರ್ ಬರಲು ವಿಳಂಬವಾಗಿದ್ದರಿಂದ ಈ ದುರಂತಕ್ಕೆ ಕಾರಣವೆಂದು ಹೇಳಲಾಗುತ್ತಿದೆ.

ಈ ಕುರಿತು ಚಿತ್ತೂರು ಜಿಲ್ಲಾಧಿಕಾರಿ ಎಂ.ಹರಿ ನಾರಾಯಣ ಅವರು ಮಾತನಾಡಿ, ಆಮ್ಲಜನಕದ ಕೊರತೆಯಿಂದಾಗಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 11 ಮಂದಿ ರೋಗಿಗಳು ದಾರುಣವಾಗಿ ಮೃತಪಟ್ಟಿದ್ದಾರೆ. ತಕ್ಷಣವೇ ಆಮ್ಲಜನಕ ಮರುಸರಬರಾಜು ಮಾಡುವ ಮೂಲಕ ಅನೇಕ ಜೀವಗಳನ್ನು ರಕ್ಷಿಸಲಾಗಿದೆ. ಸಾರಿಗೆ ವಿಳಂಬದಿಂದಾಗಿ ಈ ಸಮಸ್ಯೆ ಉದ್ಭವಿಸಿದೆ ಎಂದು ಹೇಳಿದ್ದಾರೆ.

ಆಕ್ಸಿಜನ್ ಕೊರತೆಯಿಂದ 11 ಮಂದಿ ರೋಗಿಗಳು ಮೃತಪಟ್ಟಿದ್ದಾರೆ. ತುರ್ತಾಗಿ ಆಕ್ಸಿಜನ್ ಟ್ಯಾಂಕರ್ ತರಿಸಿ ಪೂರೈಕೆ ಮಾಡಿದ್ದರಿಂದ ಉಳಿದ ರೋಗಿಗಳ ಜೀವ ಉಳಿದಿದೆ. ನಿನ್ನೆ ಮಧ್ಯರಾತ್ರಿ ಈ ಘಟನೆ ನಡೆದಿದ್ದು, ಅವಘಡದ ಬಗ್ಗೆ ತನಿಖೆ ನಡೆಸುವಂತೆ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ಅವರು ಆದೇಶಿಸಿದ್ದಾರೆ.