ತೈವಾನ್ ನಲ್ಲಿ 7.2 ತೀವ್ರತೆಯ ಪ್ರಬಲ ಭೂಕಂಪ- ಸುನಾಮಿ ಎಚ್ಚರಿಕೆ…

44
firstsuddi

ತೈಪೆ: ಇಂದು ಬೆಳಗ್ಗೆ ತೈವಾನ್‌ನ ಪೂರ್ವದಲ್ಲಿ 7.4 ತೀವ್ರತೆಯ ಪ್ರಬಲ ಭೂಕಂಪ ಸಂಭವಿಸಿದ್ದು, ಸುನಾಮಿ ಎಚ್ಚರಿಕೆ ನೀಡಲಾಗಿದೆ.

ಕಳೆದ 25 ವರ್ಷದಲ್ಲಿ ತೈವಾನ್ ನಲ್ಲಿ ಸಂಭವಿಸಿದ ಪ್ರಬಲ ಭೂಕಂಪ ಇದಾಗಿದೆ. ಭೂಕಂಪದಿಂದಾಗಿ ನಗರದ ಹಲವು ಭಾಗಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಿದ್ದು, ದಕ್ಷಿಣ ಜಪಾನ್ ಮತ್ತು ಫಿಲಿಪೈನ್ಸ್ ದ್ವೀಪಗಳಿಗೆ ಸುನಾಮಿ ಎಚ್ಚರಿಕೆ ನೀಡಲಾಗಿದೆ. ಪೂರ್ವ ತೈವಾನ್ ನಲ್ಲಿ ಹಲವಾರು ಕಟ್ಟಡಗಳು ಕುಸಿದಿವೆ, ಸಾವುನೋವುಗಳ ಬಗ್ಗೆ ಇನ್ನೂ ಯಾವುದೇ ಮಾಹಿತಿ ಲಭ್ಯವಾಗಿಲ್ಲ.

ತೈವಾನ್‌ನ ಹುವಾಲಿಯನ್ ಸಿಟಿಯಿಂದ ದಕ್ಷಿಣಕ್ಕೆ 18 ಕಿಲೋಮೀಟರ್ ದೂರದಲ್ಲಿ 34.8 ಕಿ.ಮೀ ಆಳದಲ್ಲಿ ಭೂಕಂಪದ ಕೇಂದ್ರಬಿಂದು ಪತ್ತೆಯಾಗಿದೆ. ಲಘು ಜನಸಂಖ್ಯೆ ಹೊಂದಿರುವ ಹುವಾಲಿಯನ್ ನಲ್ಲಿ ಐದು ಅಂತಸ್ತಿನ ಕಟ್ಟಡವು ಹೆಚ್ಚು ಹಾನಿಗೊಳಗಾಗಿದ್ದು, ಅದರ ಮೊದಲ ಮಹಡಿ ಕುಸಿದಿದೆ. ಉಳಿದವು 45-ಡಿಗ್ರಿ ಕೋನದಲ್ಲಿ ವಾಲುತ್ತಿದೆ. ರಾಜಧಾನಿ, ತೈಪೆಯಲ್ಲಿ, ಹಳೆಯ ಕಟ್ಟಡಗಳಿಂದ ಮತ್ತು ಕೆಲವು ಹೊಸ ಕಚೇರಿ ಸಂಕೀರ್ಣಗಳಿಂದ ಅಂಚುಗಳು ಬಿದ್ದಿವೆ.

ಜಪಾನ್‌ನ ಹವಾಮಾನ ಸಂಸ್ಥೆಯು ಮಿಯಾಕೊಜಿಮಾ ದ್ವೀಪ ಸೇರಿದಂತೆ ಈ ಪ್ರದೇಶದಲ್ಲಿನ ದೂರದ ಜಪಾನಿನ ದ್ವೀಪಗಳಿಗೆ ಮೂರು ಮೀಟರ್‌ಗಳಷ್ಟು (10 ಅಡಿ) ಎತ್ತರದ ಸುನಾಮಿ ಅಲೆಗಳ ಬಗ್ಗೆ ಎಚ್ಚರಿಕೆಯನ್ನು ನೀಡಿದೆ.

ಕರಾವಳಿ ಪ್ರದೇಶಗಳಲ್ಲಿನ ಜನರು ಜಾಗರೂಕರಾಗಿರಬೇಕು. ಸಮುದ್ರದಲ್ಲಿ ಭಾರೀ ಗಾತ್ರದ ಅಲೆಗಳು ಏಳಬಹುದು ಎಂದು ತೈವಾನ್ ತನ್ನ ಪ್ರಜೆಗಳಿಗೆ ಪಠ್ಯ ಸಂದೇಶವನ್ನು ಕಳುಹಿಸುವ ಮೂಲಕ ಎಚ್ಚರಿಕೆ ನೀಡಿದೆ.