ದಲಿತರು ಆಸೆ, ಆಮಿಷಗಳಿಗೆ ಬಲಿಯಾಗದೆ ಸ್ವಾಭಿಮಾನಿಗಳಾಗಿ ಬದುಕಬೇಕು : ಕೆ.ಟಿ.ರಾಧಾಕೃಷ್ಣ

55
firstsuddi

ಚಿಕ್ಕಮಗಳೂರು: ದಲಿತರು ಮತ್ತು ಕೆಳವರ್ಗದ ಜನ ಚುನಾವಣೆ ವೇಳೆ ಆಸೆ, ಆಮಿಷಗಳಿಗೆ ಬಲಿಯಾಗದೆ ಸ್ವಾಭಿಮಾನಿಗಳಾಗಿ ಬದುಕಬೇಕು ಎಂದು ಬಿಎಸ್‍ಪಿ ಜಿಲ್ಲಾಧ್ಯಕ್ಷ ಕೆ.ಟಿ.ರಾಧಾಕೃಷ್ಣ ಸಲಹೆ ನೀಡಿದರು.

ಜಿಲ್ಲಾ ಸಹೋದರತ್ವ ಸಮಿತಿ ನಗರದ ಲವಾಸ ಸಭಾಂಗಣದಲ್ಲಿ ಇಂದು ಆಯೋಜಿಸಿದ್ದ ಜಿಲ್ಲಾ ಮಟ್ಟದ ಕಾರ್ಯಕರ್ತರ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ದಲಿತರು ಮತ್ತು ಕೆಳವರ್ಗದ ಜನ ಆಸೆ, ಆಮಿಷಗಳಿಗೆ ಬಲಿಯಾಗಿ ತಮ್ಮ ಮತವನ್ನು ಮಾರಿಕೊಳ್ಳುತ್ತಿರುವುದರಿಂದಾಗಿ ರಾಜಕಾರಣಿಗಳು ಮತ್ತು ರಾಜಕೀಯ ಪಕ್ಷಗಳು ಚುನಾವಣೆಯನ್ನು ವ್ಯಾಪಾರವನ್ನಾಗಿ ಮಾಡಿಕೊಂಡಿವೆ ಎಂದು ವಿಷಾದಿಸಿದರು.

ಚುನಾವಣೆ ವೇಳೆ ಕೋಟಿಗಟ್ಟಲೆ ಹಣ ಸುರಿದು ಹಣ, ಹೆಂಡ ಹಂಚಿ ಇಲ್ಲಸಲ್ಲದ ಆಮಿಷಗಳನ್ನೊಡ್ಡಿ ಗೆಲ್ಲುವ ರಾಜಕಾರಣಿಗಳು ನಂತರ ಮತದಾರರತ್ತ ತಿರುಗಿ ನೋಡದೆ ಭ್ರಷ್ಟಾಚಾರದಲ್ಲಿ ಮುಳುಗಿ ದೇಶ, ರಾಜ್ಯ ಮತ್ತುಜನರ ಹಣವನ್ನು ಲೂಟಿ ಹೊಡೆಯುತ್ತಿದ್ದಾರೆ. ಇದರಿಂದಾಗಿ ಪ್ರಜಾಪ್ರಭುತ್ವ ವ್ಯವಸ್ಥೆಗೆ ಧಕ್ಕೆಯಾಗಿದೆ ಎಂದರು.

ಈ ಬಾರಿಯ ಚುನಾವಣೆಯಲ್ಲಂತೂ ಹಣ, ಹೆಂಡದ ಹೊಳೆ ಮಿತಿಮೀರಿ ಹರಿಯುತ್ತಿದೆ. ಎಲ್ಲೆಡೆ ಬಾಡೂಟ ಮಧ್ಯದ ಸಮಾರಾಧನೆ ನಡೆಸಿ ಮತದಾರರನ್ನು ಕೊಂಡುಕೊಳ್ಳುವ ಕೆಲಸ ಮಾಡುತ್ತಿದ್ದಾರೆ. ಈಗಾಗಲೇ ಮತದಾರರಿಗೆ ಹಂಚಲು ಕೊಂಡೊಯ್ಯುತ್ತಿದ್ದ ಕೋಟಿಗಟ್ಟಲೆ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದ ಅವರು, ಆರೋಪಿಗಳ ವಿರುದ್ಧಕಠಿಣಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ದಲಿತರು, ಕೆಳವರ್ಗದ ಜನ ಈಗಲಾದರೂ ಎಚ್ಚೆತ್ತುಕೊಂಡು ಸ್ವಾಭಿಮಾನಿಗಳಾಗಬೇಕು. ಅಂಬೇಡ್ಕರ್ ಅವರು ಶ್ರಮಪಟ್ಟು ನೀಡಿರುವ ಮತದಾನದ ಹಕ್ಕನ್ನು ಮಾರಿಕೊಳ್ಳುವುದನ್ನು ಬಿಡಬೇಕು. ವಿವೇಕ ವಿವೇಚನೆಯಿಂದ ಮತದಾನ ಮಾಡಬೇಕು ಎಂದು ಕಿವಿ ಮಾತು ಹೇಳಿದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಜಿಲ್ಲಾ ಸಹೋದರತ್ವ ಸಮಿತಿಯ ಅಧ್ಯಕ್ಷೆ ಕೆ.ಬಿ.ಸುಧಾ, ದಲಿತರು ಮತ್ತು ಕೆಳವರ್ಗದ ಜನ ದೇಶದ ಸಾರ್ವಜನಿಕ ಸಂಪನ್ಮೂಲಗಳನ್ನು, ಆಸ್ತಿಗಳನ್ನು ಮಾರಾಟ ಮಾಡುತ್ತಿರುವವರು, ಹಾಲು ಸೇರಿದಂತೆ ಅತ್ಯಗತ್ಯ ವಸ್ತುಗಳ ಬೆಲೆ ಏರಿಕೆ ಮಾಡಿ ಮನಬಂದಂತೆ ತೆರಿಗೆ ವಿಧಿಸಿ ಬಡವರು ಬದುಕದಂತೆ ಮಾಡಿರುವವರನ್ನು ಚುನಾವಣೆಯಲ್ಲಿ ತಿರಸ್ಕರಿಸಬೇಕು. ಸಾಮಾಜಿಕ ನ್ಯಾಯ ಮತ್ತು ಎಲ್ಲರಿಗೂ ಸಮಪಾಲು, ಎಲ್ಲರಿಗೂ ಸಮ ಬಾಳಿಗಾಗಿ ಹೋರಾಟ ನಡೆಸುತ್ತಿರುವ ಬಿಎಸ್‍ಪಿಯನ್ನು ಬೆಂಬಲಿಸಬೇಕು ಎಂದು ಮನವಿ ಮಾಡಿದರು.

ಬಿಎಸ್‍ಪಿ ಅಸೆಂಬ್ಲಿ ಸಂಯೋಜಕಿ ಕೆ.ಎಸ್.ಮಂಜುಳ, ಜಿಲ್ಲಾ ಉಪಾಧ್ಯಕ್ಷ ಕೆ.ಆರ್.ಗಂಗಾಧರ್, ತಾಲೂಕು ಪ್ರಧಾನ ಕಾರ್ಯದರ್ಶಿ ವಸಂತ, ಸಾಕಮ್ಮ, ಕಲಾವತಿ, ಜಯಚಂದ್ರ, ಸೂರಿಕುಮಾರ್, ಹೊನ್ನಪ್ಪ, ವಿಜಯಕುಮಾರ್, ಸವಿತಾ ಉಪಸ್ಥಿತರಿದ್ದರು.