ದೂರು ಹೇಳುವುದಕ್ಕೆ ಒಂದು ಕ್ರಮ, ವ್ಯವಸ್ಥೆ ಇರುತ್ತದೆ : ರೋಹಿಣಿ ಸಿಂಧೂರಿ.

141
firstsuddi

ಮೈಸೂರು : ಜಿಲ್ಲೆಯಲ್ಲಿ ಇಬ್ಬರು ಐಎಎಸ್ ಅಧಿಕಾರಿಗಳ ನಡುವಿನ ಕಿತ್ತಾಟ ಬೀದಿ ಬಂದಿದ್ದು ಇದೊಂದು ರೀತಿಯಲ್ಲಿ ರಾಜ್ಯ ಸರ್ಕಾರಕ್ಕೂ ಮುಜುಗರ ತಂದಿದೆ. ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರ ವಿರುದ್ಧ ಆರೋಪಗಳ ಸುರಿ ಮಳೆಗೈದಿರುವ ಮೈಸೂರು ಮಹಾನಗರ ಪಾಲಿಕೆ ಆಯುಕ್ತೆ ಶಿಲ್ಪಾ ನಾಗ್ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

ಇದೀಗ ಮೈಸೂರು ಮಹಾ ನಗರ ಪಾಲಿಕೆ ಆಯುಕ್ತೆ ಶಿಲ್ಪನಾಗ್ ಮಾಡಿರುವ ಆರೋಪಕ್ಕೆ ಪ್ರತಿಕ್ರಿಯೆ ನೀಡಿರುವ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರು, ಅಧಿಕಾರಿಗಳಿಗೆ ಕೆಲಸದಲ್ಲಿ ಒತ್ತಡ ಇರುತ್ತದೆ, ಯಾರಿಗೆ ಒತ್ತಡ ಇರುವುದಿಲ್ಲ ಹೇಳಿ, ದೂರು ಹೇಳುವುದಕ್ಕೆ ಒಂದು ಕ್ರಮ, ವ್ಯವಸ್ಥೆ ಇರುತ್ತದೆ ಯಾರೂ ಕೂಡ ಆ ವ್ಯವಸ್ಥೆಯನ್ನು ಮೀರಬಾರದು, ನಾನು ಸರಕಾರದ ಮುಖ್ಯ ಕಾರ್ಯದರ್ಶಿಗೆ ಈ ಎಲ್ಲಾ ವಿಚಾರದ ಬಗ್ಗೆ ಖುದ್ದಾಗಿ ವಿವರ ನೀಡುತ್ತೇನೆ ಎಂದು ರೋಹಿಣಿ ಸಿಂಧೂರಿ ಹೇಳಿದ್ದಾರೆ.

ಪ್ರತಿ ಜಿಲ್ಲೆಯಲ್ಲಿ ಸಿಎಸ್ ಆರ್ ಫಂಡ್ ಇರಲಿದೆ. ಈಗ ವಾರದ ಹಿಂದೆ ವೈದ್ಯರ ನಡಿಗೆ ಹಳ್ಳಿ ಕಡೆಗೆ ಕಾರ್ಯಕ್ರಮ ಇರುವುದರಿಂದ ಇದಕ್ಕೆ ನಾವು ಸಿಎಸ್ ಆರ್ ಫಂಡ್ ಪಡೆದುಕೊಳ್ಳಬೇಕಿದೆ. ಯಾವುದಕ್ಕೆ, ಯಾವ ವಾರ್ಡ್ ಗೆ ಎಷ್ಟು ಖರ್ಚು ಮಾಡಿದ್ದೀರಿ, ಎಲ್ಲ 12 ಕೋಟಿ ಖರ್ಚು ಮಾಡಿದ್ದೀರಾ ಎಂದು ಕಾರ್ಪೊರೇಷನ್ ನಲ್ಲಿ ಕೇಳಿದ್ದು ನಿಜ, ನಿಮಗೆ ನಿಮ್ಮ ಮೇಲಿನ ಅಧಿಕಾರಿ ಮೇಲೆ ಬೇಸರ ಇದ್ದರೆ ಹೇಳಬೇಕು. ಅದನ್ನ ಬಿಟ್ಟು ಮಾಧ್ಯಮದ ಮುಂದೆ ಹೇಳೋದು ಎಷ್ಟು ಸರಿ. 2019ರ ಫೆಬ್ರವರಿ 14ಕ್ಕೆ ಮೈಸೂರು ಮಹಾನಗರ ಪಾಲಿಕೆಗೆ ಆಯುಕ್ತೆಯಾಗಿ ಶಿಲ್ಪಾ ನಾಗ್ ಬಂದಿದ್ದಾರೆ, ಇಷ್ಟು ದಿನ ಇಲ್ಲದ ಸಮಸ್ಯೆ, ಆರೋಪ ಈಗ  ಏಕೆ ಎಂದು ರೋಹಿಣಿ ಸಿಂಧೂರಿ ಪ್ರಶ್ನಿಸಿದರು.

ಅಧಿಕಾರಿಗಳಿಗೆ ಒಂದು ಫೋರಂ ಇರುತ್ತೆ. ಆ ಅಧಿಕಾರದನ್ವಯ ನಾನು ಹೇಳಿದ್ದೇನೆ ಅಷ್ಟೇ. ನಮ್ಮ ಉದ್ದೇಶ ಜುಲೈ ಫಸ್ಟ್ ಗೆ ಕೋವಿಡ್ ಮುಕ್ತ ಜಿಲ್ಲೆ ಮಾಡಬೇಕು. ಒಂದು ವಾರ್ಡ್ ನಲ್ಲಿ 400 ಕೇಸ್ ಇದ್ದು ನಾಳೆ 40 ಕೇಸ್ ಬಂದರೆ ಅದು ಸರಿಯಾಗಿ ಹೊಂದಾಣಿಕೆ ಆಗಲ್ಲ. ನಾವು ಜನರಿಗೆ ಸರಿಯಾದ ಅಂಕಿ ಅಂಶ ಕೊಡಬೇಕು. ಇದರಲ್ಲಿ ವ್ಯತ್ಯಾಸ ಬರಬಾರದು ಅದು ಅಧಿಕೃತ ಡಾಕ್ಯುಮೆಂಟ್ ಸರಿಯಾಗಿ ಇರಬೇಕೆಂಬುದು ನಮ್ಮ ಉದ್ದೇಶ ಎಂದು ಪಾಲಿಕೆ ಆಯುಕ್ತೆ ಶಿಲ್ಪಾನಾಗ್ ಆರೋಪಕ್ಕೆ ಡಿಸಿ ರೋಹಿಣಿ ಸಿಂಧೂರಿ ಸ್ಪಷ್ಟನೆ ನೀಡಿದ್ದಾರೆ.

ಇಂದು ಶಿಲ್ಪಾ ನಾಗ್ ಅವರ ಪರವಾಗಿ ರೋಹಿಣಿ ಸಿಂಧೂರಿ ವಿರುದ್ಧ ಮೈಸೂರು ಮಹಾನಗರ ಪಾಲಿಕೆ ಸದಸ್ಯರು, ಪೌರಕಾರ್ಮಿಕರು, ಅಧಿಕಾರಿಗಳು ಪ್ರತಿಭಟನೆ ನಡೆಸುತ್ತಿದ್ದು, ಶಿಲ್ಪಾ ನಾಗ್ ಅವರಿಗೆ ನ್ಯಾಯ ಕೊಡಿಸಬೇಕು, ರೋಹಿಣಿ ಸಿಂಧೂರಿಯವರನ್ನು ಬೇರೆ ಕಡೆಗೆ ವರ್ಗಾಯಿಸಬೇಕೆಂದು ಒತ್ತಾಯಿಸಿದರು.

ಇನ್ನು ಈ ಬಗ್ಗೆ ಪ್ರತಿಕ್ರಿಯಿಸಿರುವ ಜಿಲ್ಲಾ ಉಸ್ತುವಾರಿ ಸಚಿವ ಎಸ್ ಟಿ ಸೋಮಶೇಖರ್ ಅವರು ಇಂದು ಸರ್ಕಾರದ ಮುಖ್ಯ ಕಾರ್ಯದರ್ಶಿಗಳು ಜಿಲ್ಲೆಗೆ ಆಗಮಿಸುತ್ತಿದ್ದು ಇಬ್ಬರು ಅಧಿಕಾರಿಗಳ ಜೊತೆ ಮಾತುಕತೆ ನಡೆಸಿ ಇನ್ನೆರಡು ದಿನಗಳೊಳಗೆ ಸಮಸ್ಯೆ ಬಗೆಹರಿಸುವ ವಿಶ್ವಾಸವಿದೆ ಎಂದು ತಿಳಿಸಿದ್ದಾರೆ.