ದೆವ್ವ ಬಿಡಿಸುವುದಾಗಿ ನಂಬಿಸಿ 3 ವರ್ಷದ ಹೆಣ್ಣು ಮಗುವಿಗೆ ಕೋಲಿನಿಂದ ಹೊಡೆದು ಕೊಲೆ…

207
firstsuddi

ಚಿತ್ರದುರ್ಗ : ದೆವ್ವ ಬಿಡಿಸುವ ನೆಪದಲ್ಲಿ ಪೂಜಾರಿಯೊಬ್ಬ 3 ವರ್ಷದ ಹೆಣ್ಣು ಮಗುವನ್ನು ಹೊಡೆದು ಕೊಲೆ ಮಾಡಿರುವ ಘಟನೆ ಜಿಲ್ಲೆಯ ಹೊಳಲ್ಕೆರೆ ತಾಲ್ಲೂಕಿನ ಅಜ್ಜಿ ಕ್ಯಾತನಹಳ್ಳಿಯಲ್ಲಿ ನಡೆದಿದೆ. ಪೂರ್ವಿಕಾ(3) ಮೃತ ಮಗು ಎಂದು ಗುರುತಿಸಲಾಗಿದೆ. ಪ್ರವೀಣ್ ಹಾಗೂ ಶ್ಯಾಮಲಾ ದಂಪತಿಯ ಪುತ್ರಿ ಪೂರ್ವಿಕಾ ಕಳೆದ ಮೂರು ದಿನಗಳಿಂದ ಸರಿಯಾಗಿ ಊಟ, ನಿದ್ದೆ ಮಾಡುತ್ತಿರಲಿಲ್ಲ. ಇದರಿಂದ ದಂಪತಿ ಮಗುವನ್ನು ಕರೆದುಕೊಂಡು ಗ್ರಾಮದ ಚೌಡಮ್ಮ ದೇವಾಲಯದ ಪೂಜಾರಿ ರಾಕೇಶ್ ಎಂಬುವವರ ಬಳಿ ಕರೆದುಕೊಂಡು ಹೋಗಿದ್ದಾರೆ. ಈ ವೇಳೆ ಪೂಜಾರಿ ರಾಕೇಶ್ ಮಗುವಿಗೆ ದೆವ್ವ ಹಿಡಿದಿದೆ ಎಂದು ದಂಪತಿಯನ್ನು ನಂಬಿಸಿ ಪೂಜೆ ಮಾಡಿಸಬೇಕು ಎಂದು ಹೇಳಿದ್ದಾರೆ. ಇದನ್ನು ನಂಬಿದ ಪೋಷಕರು ಮಗುವನ್ನು ಪೂಜೆಗೆ ಕಳುಹಿಸಿದ್ದಾರೆ. ಪೂಜಾರಿ ರಾಕೇಶ್ ಪೂಜೆ ಮಾಡಲು ಕರೆದುಕೊಂಡು ಹೋಗಿ ಕುಟೀರಕ್ಕೆ ಕರೆದುಕೊಂಡು ಹೋಗಿ ಕೋಲಿನಿಂದ ಮಗುವಿಗೆ ಹೊಡೆದಿದ್ದಾರೆ. ಬಳಿಕ ಕೋಲಿನ ಹೊಡೆತಕ್ಕೆ ಮಗು ಪ್ರಜ್ಞೆ ತಪ್ಪಿ ಬಿದ್ದಿದ್ದು, ಮಗುವನ್ನು ತನ್ನ ಪೋಷಕರಿಗೆ ಒಪ್ಪಿಸಿದ್ದಾರೆ. ಕೂಡಲೇ ಪೋಷಕರು ಮಗುವನ್ನು ಆಸ್ಪತ್ರೆಗೆ ದಾಖಲಿಸಲು ಕರೆದುಕೊಂಡು ಹೋಗಿದ್ದಾರೆ. ಆದರೆ ಮಗು ಮಾರ್ಗಮಧ್ಯದಲ್ಲೇ ಕೊನೆಯುಸಿರೆಳೆದಿದೆ. ಈ ಕುರಿತು ಚಿಕ್ಕಜಾಜೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿ ಪೂಜಾರಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.