ದೇಶವನ್ನು ಸದೃಢವಾಗಿ ಮಾಡಲು ಎಲ್ಲರೂ ಒಂದಾಗಬೇಕಿದೆ : ಪ್ರಧಾನಿ ನರೇಂದ್ರ ಮೋದಿ.

552
firstsuddi

ತುಮಕೂರು : ಪ್ರಧಾನಿ ನರೇಂದ್ರ ಮೋದಿ ಅವರು ಇಂದು ತುಮಕೂರಿನ ಶ್ರೀ ಸಿದ್ಧಗಂಗಾ ಮಠಕ್ಕೆ ಆಗಮಿಸಿದ್ದು, ಸಿದ್ಧಗಂಗಾ ಶ್ರೀಗಳ ಗದ್ದುಗೆಗೆ ತೆರಳಿ ನಮನ ಸಲ್ಲಿಸಿದ ಬಳಿಕ ಸಿದ್ದಲಿಂಗ ಶ್ರೀಗಳು ಮೋದಿ ಅವರ ಹಣೆಗೆ ವಿಭೂತಿ ಹಚ್ಚಿ, ಕೊರಳಿಗೆ ರುದ್ರಾಕ್ಷಿ ಮಾಲೆ ಹಾಕಿ ಬರಮಾಡಿಕೊಂಡರು. ಸಿದ್ದಗಂಗಾ ಮಠದ ವತಿಯಿಂದ ಶ್ರೀ ಶ್ರೀ ಶಿವಕುಮಾರ ಸ್ವಾಮೀಜಿಗಳ ಬೆಳ್ಳಿಯ ಪುತ್ಥಳಿಯನ್ನು ನೀಡಿ ಗೌರವಿಸಿದರು. ಬಳಿಕ ಮಠದ ಮಕ್ಕಳನ್ನು ಉದ್ದೇಶಿಸಿ ಮಾತನಾಡಿದ ಅವರು, ಹೊಸ ವರ್ಷದ ಆರಂಭದಲ್ಲಿ ಸಿದ್ದಗಂಗಾ ಮಠಕ್ಕೆ ಆಗಮಿಸಿದ್ದು ನನಗೆ ತುಂಬಾ ಸಂತೋಷವಾಗಿದೆ. ಮೊದಲಿಗೆ ಎಲ್ಲರಿಗೂ ಹೊಸ ವರ್ಷದ ಶುಭಾಷಯಗಳು ಎಂದು ಕನ್ನಡದಲ್ಲೇ ಭಾಷಣವನ್ನು ಆರಂಭಿಸಿದರು. ಶಿವಕುಮಾರ ಸ್ವಾಮೀಜಿಗಳು ಭೌತಿಕವಾಗಿ ಈ ಕಾರ್ಯಕ್ರಮದಲ್ಲಿ ಇಲ್ಲದಿರುವುದು ಅವರ ಅನುಪಸ್ಥಿತಿ ಕಾಡುತ್ತಿದೆ. ಇಂದು ಸಿದ್ದಗಂಗಾ ಶ್ರೀಗಳ ವಸ್ತು ಸಂಗ್ರಹಾಲಯದ ಶಿಲಾನ್ಯಾಸದ ಉದ್ಘಾಟನೆಗೆ ಆಗಮಿಸಿರುವುದು ನನ್ನ ಸೌಭಾಗ್ಯ. ಸಿದ್ದಗಂಗಾ ಶ್ರೀಗಳ ಪ್ರೇರಣೆಯಿಂದ ದಶಕಗಳಿಂದ ಸಮಾಜಕ್ಕೆ ಸೇವೆ ಸಲ್ಲಿಸುವುಂತಾಗಿದೆ. ಅಲ್ಲದೇ ಕೆಲವು ದಿನಗಳ ಹಿಂದೆಯಷ್ಟೇ ಕರ್ನಾಟದ ಮತ್ತೊಬ್ಬ ಸಂತರು ನಮ್ಮನ್ನು ಅಗಲಿದ್ದಾರೆ. ಪೇಜಾವರ ವಿಶ್ವೇಶತೀರ್ಥ ಸ್ವಾಮೀಜಿಗಳ ಅಗಲಿಕೆಯಿಂದ ಶೂನ್ಯ ಆವರಿಸಿದೆ. ಇಂತಹ ಮಹಾನ್ ಸಂತರು ಹಾಕಿಕೊಟ್ಟ ಮಾರ್ಗದಲ್ಲೇ ನಾವು ಚಲಿಸಬೇಕು. ದೇಶವನ್ನು ಸಮೃದ್ಧ, ಸಕ್ಷಮ, ಸಶಕ್ತವನ್ನಾಗಿ ಮಾಡುವ ಆಕಾಂಕ್ಷೆ ಎಲ್ಲ ಜನರದ್ದಾಗಿದ್ದು, ಹೀಗಾಗಿ ದೇಶವನ್ನು ಸದೃಢವಾಗಿಸಲು ಎಲ್ಲರೂ ಒಗ್ಗಟ್ಟಾಗಿ ಇರಬೇಕಿದೆ. 2014ರ ಬಳಿಕ ಸಾಮಾನ್ಯ ಜನರ ಬದಲಾವಣೆ ತರಲು ಸರ್ಕಾರ ಸನ್ನದ್ಧವಾಗಿದೆ ಎಂದು ತಿಳಿಸಿದರು.
ಇದೇ ವೇಳೆ ಆರ್ಟಿಕಲ್ 370 ರದ್ದತಿ ಬಗ್ಗೆ ಮಾತನಾಡಿದ ಅವರು, ಆರ್ಟಿಕಲ್ 370 ರದ್ದುಗೊಳಿಸುವ ಮೂಲಕ ಜಮ್ಮು ಮತ್ತು ಕಾಶ್ಮೀರ ಹಾಗೂ ಲಡಾಕ್ ಜನರಿಗೆ ಅವರ ಹಕ್ಕನ್ನು ನೀಡಿದ್ದೇನೆ. ಅಲ್ಲಿನ ಜನರ ಭಯೋತ್ಪಾದನೆಯ ಭಯವನ್ನು ದೂರ ಮಾಡಿದ್ದೇವೆ ಎಂದರು. ದೇಶದಲ್ಲಿ ರಾಮ ಮಂದಿರ ನಿರ್ಮಾಣದ ವಾತಾವರಣ ನಿರ್ಮಿಸಲಾಗಿದೆ. ಅಲ್ಲದೇ ವಿರೋಧ ಪಕ್ಷಗಳು ಪೌರತ್ವ ತಿದ್ದುಪಡಿ ಕಾಯ್ದೆಯನ್ನು ವಿರೋಧಿಸುತ್ತಿದೆ. ಪಾಕಿಸ್ತಾನದಲ್ಲಿ ಧರ್ಮದ ಆಧಾರದ ಮೇಲೆ ಹಿಂಸಿಸಲಾಗುತ್ತಿದೆ. ಅಲ್ಲಿಯ ಹಿಂದೂ, ಸಿಖ್, ಜೈನರು ಭಾರತಕ್ಕೆ ಬರುತ್ತಿದ್ದಾರೆ. ಇಂದು ಜನರು ತಮ್ಮ ಧರ್ಮ, ಪ್ರಾಣ, ಹೆಣ್ಣು ಮಕ್ಕಳನ್ನು ರಕ್ಷಿಸಲು ಭಾರತಕ್ಕೆ ಆಗಮಿಸುತ್ತಿರುವ ಶರಣಾರ್ತಿಗಳಿಗೆ ಸಹಾಯ ಮಾಡುವುದು ನಮ್ಮ ಕರ್ತವ್ಯ. ಶರಣು ಎಂದು ನಮ್ಮ ದೇಶಕ್ಕೆ ಆಗಮಿಸಿದವರನ್ನು ರಕ್ಷಿಸುವುದು ನಮ್ಮ ಸಂಸಕೃತಿ. ಆದರೆ ಪ್ರತಿಪಕ್ಷಗಳು ಜನರನ್ನು ದಾರಿ ತಪ್ಪಿಸುವ ಸಲುವಾಗಿ ರಸ್ತೆಗಳಿದು ಪ್ರತಿಭಟನೆ ನಡೆಸುತ್ತಿವೆ. ಆದರೆ ಇವರು ಯಾಕೆ ಪಾಕಿಸ್ತಾನದ ವಿರುದ್ಧ ಮಾತನಾಡುವುದಿಲ್ಲ ಎಂದು ಪ್ರತಿಪಕ್ಷಗಳನ್ನು ಪ್ರಶ್ನಿಸಿದರು.