ರಾಂಚಿ : ಜಾರ್ಖಂಡ್ ನ ಜೆಮ್ಶೆಡ್ಪುರದಲ್ಲಿ ಧಾರ್ಮಿಕ ಧ್ವಜವನ್ನು ಅಪವಿತ್ರಗೊಳಿಸಿರುವ ಹಿನ್ನೆಲೆಯಲ್ಲಿ ಎರಡು ಗುಂಪುಗಳ ನಡುವೆ ಹಿಂಸಾತ್ಮಕ ಘರ್ಷಣೆ ನಡೆದಿದೆ.
ಶಾಸ್ತ್ರೀನಗರದಲ್ಲಿ ಹಿಂಸಾಚಾರ ನಡೆದಿದೆ. ಮೂಲಗಳ ಪ್ರಕಾರ ರಾಮನವಮಿಯ ಧ್ವಜದಲ್ಲಿ ಮಾಂಸದ ತುಂಡನ್ನು ಕಟ್ಟಿದ್ದನ್ನು ಸ್ಥಳೀಯ ಸಂಘಟನೆಯ ಸದಸ್ಯರು ನೋಡಿದ್ದಾರೆ. ಬಳಿಕ ಶನಿವಾರ ರಾತ್ರಿ ವೇಳೆ ಈ ವಿಚಾರವಾಗಿ 2 ಗುಂಪುಗಳ ನಡುವೆ ಉದ್ವಿಗ್ನತೆ ಉಂಟಾಗಿದೆ. ಹಿಂಸಾಚಾರ ಮುಂದುವರಿದು ದುಷ್ಕರ್ಮಿಗಳು ಕಲ್ಲು ತೂರಾಟ ನಡೆಸಿ ಹಲವು ಅಂಗಡಿಗಳಿಗೆ ಮತ್ತು ಆಟೋ ರಿಕ್ಷಾಕ್ಕೆ ಬೆಂಕಿ ಹಚ್ಚಿದ್ದಾರೆ.
ಗುಂಪನ್ನು ಚದುರಿಸಲು ಪೊಲೀಸರು ಅಶ್ರುವಾಯುವನ್ನು ಪ್ರಯೋಗಿಸಿದ್ದಾರೆ. ಬಳಿಕ ನಗರದಲ್ಲಿ ಸೆಕ್ಷನ್ 144ನ್ನು ವಿಧಿಸಲಾಗಿದ್ದು, ಸದ್ಯ ಪರಿಸ್ಥಿತಿಯನ್ನು ನಿಯಂತ್ರಿಸಲಾಗಿದೆ. ಕಾನೂನು ಸುವ್ಯವಸ್ಥೆ ಕಾಪಾಡಲು ಶಾಸ್ತ್ರಿನಗರದಲ್ಲಿ ಸಾಕಷ್ಟು ಪೊಲೀಸ್ ಪಡೆ ನಿಯೋಜಿಸಲಾಗಿದೆ. ಈಗ ಪರಿಸ್ಥಿತಿ ನಿಯಂತ್ರಣದಲ್ಲಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಉದ್ವಿಗ್ನತೆಯ ದೃಷ್ಟಿಯಿಂದ ಮೊಬೈಲ್ ಇಂಟರ್ನೆಟ್ ಅನ್ನು ಭಾಗಶಃ ಸ್ಥಗಿತಗೊಳಿಸಲಾಗಿದೆ.










