ಬೆಂಗಳೂರು: ನಟ, ಸಾಮಾಜಿಕ ಹೋರಾಟಗಾರ ಚೇತನ್ ಅಹಿಂಸಾ ಅವರ ಭಾರತದ ವೀಸಾವನ್ನು ಕೇಂದ್ರ ಸರ್ಕಾರ ರದ್ದು ಗೊಳಿಸಿದೆ.
ವಿದೇಶಿಯರ ಪ್ರಾದೇಶಿಕ ನೋಂದಣಿ ಕಚೇರಿಯಿಂದ ಪತ್ರವನ್ನು ಚೇತನ್ ಅವರು ಏಪ್ರಿಲ್ 14 ರಂದು ಸ್ವೀಕರಿಸಿದ್ದಾರೆ. ಸ್ವೀಕರಿಸಿದ 15 ದಿನಗಳಲ್ಲಿ ಒಸಿಐ ಕಾರ್ಡ್ ಅನ್ನು ಹಿಂದಿರುಗಿಸುವಂತೆ ಸೂಚಿಸಲಾಗಿದೆ. ಹಿಂದುತ್ವವನ್ನು ಪ್ರಶ್ನಿಸಿ ಟ್ವೀಟ್ ಮಾಡಿದ್ದಕ್ಕಾಗಿ ಬೆಂಗಳೂರು ಪೊಲೀಸರು ಅವರನ್ನು ಬಂಧಿಸಿದ್ದರು.
ಚೇತನ್ ಅವರು ಸಾಗರೋತ್ತರ ವೀಸಾದ ಅಡಿ ಭಾರತದಲ್ಲಿ ವಾಸವಾಗಿದ್ದರು. ಇದೀಗ ಈ ವೀಸಾವನ್ನು ಕೇಂದ್ರ ಗೃಹ ಇಲಾಖೆ ರದ್ದುಗೊಳಿಸಿದೆ. ನಟ ಚೇತನ್ ಅವರ ಪೋಷಕರು ಮೂಲತ: ಭಾರತೀಯರು. ಚೇತನ್ ಅಮೆರಿಕದಲ್ಲಿ ಜನಿಸಿದ್ದರಿಂದ ಅಮೆರಿಕದ ಪೌರತ್ವ ಹೊಂದಿದ್ದಾರೆ.
ಇನ್ನು ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿರುವ ಚೇತನ್, ನಾನು ಮೊದಲು ಅಮೇರಿಕದಲ್ಲಿದ್ದೆ, ಬಳಿಕ ಭಾರತಕ್ಕೆ ಬಂದೆ. ಸಿನಿಮಾ ಸೇರಿದಂತೆ ಸಾಕಷ್ಟು ಕ್ಷೇತ್ರಗಳಲ್ಲಿ ಕಾರ್ಯನಿರ್ವಹಿಸಿದ್ದೇನೆ. ಹೋರಾಟ ಮಾಡಿ ಆದಿವಾಸಿಗಳಿಗೆ 528 ಮನೆಗಳನ್ನು ಕಟ್ಟಿಸಿದ್ದೇನೆ. ನನ್ನ ಸಿದ್ಧಾಂತ, ಅಂಬೇಡ್ಕರ್ ವಾದ, ಪೆರಿಯರ್ ವಾದ ಸರ್ಕಾರಕ್ಕೆ ಇಷ್ಟವಾಗಿಲ್ಲ ಎಂದು ಈ ರೀತಿ ಕ್ರಮ ಕೈಗೊಂಡಿದ್ದಾರೆ ಎಂದು ಅಸಮಾಧಾನ ಹೊರಹಾಕಿದ್ದಾರೆ.
ಕಳೆದ 10 ತಿಂಗಳ ಹಿಂದೆ ಕ್ರಿಮಿನಲ್ ಕೆಲಸಗಳಲ್ಲಿ ಭಾಗಿಯಾಗುತ್ತಿದ್ದೀರಿ, ನಿಮ್ಮ ವೀಸಾ ರದ್ದು ಮಾಡಬಹುದು ಎಂಬ ಶೋಕಾಸ್ ನೋಟಿಸ್ ನೀಡಿದ್ದರು. ಆಗ ಗೃಹ ಇಲಾಖೆಗೆ ಹೋಗಿ ಎಲ್ಲಾ ದಾಖಲೆ ಸಲ್ಲಿಸಿ ಬಂದಿದ್ದೆ. ದೇಶವಿರೋಧಿ ಚುಟುವಟಿಕೆಯಲ್ಲಿ ನಾನು ಎಲ್ಲಿ ಭಾಗಿಯಾಗಿದ್ದೇನೆ? ಉದ್ದೇಶಪೂರ್ವಕವಾಗಿ ನನ್ನ ಮೇಲೆ ಈ ರೀತಿ ಪಿತೂರಿ ಮಾಡುತ್ತಿದ್ದಾರೆ. ನಾನು ಈ ದೇಶದಲ್ಲಿ ಇರಬಾರದು ಅಂತ ವೀಸಾ ರದ್ದುಗೊಳಿಸಿದ್ದಾರೆ. ವಾಕ್ ಸ್ವಾತಂತ್ರವನ್ನು ಕಿತ್ತು, ಜೈಲಿಗೆ ಹಾಕುವುದಲ್ಲದೇ ನಾನು ದೇಶದಲ್ಲೂ ಇರಬಾರದು ಎಂದು ವೀಸಾ ರದ್ದು ಮಾಡಿದ್ದಾರೆ ಎಂದು ಕಿಡಿಕಾರಿದರು.
ನಾನು ವಕೀಲರ ಬಳಿ ಮಾತನಾಡಿದ್ದೇನೆ. ಇದಕ್ಕೆ ವಿರುದ್ಧವಾಗಿ ಸ್ಟೇ ತರುತ್ತೇನೆ. ನಾನು ಕಾನೂನಿನ ಹೋರಾಟ ಮಾಡುತ್ತೇನೆ. ನನಗೆ 15 ದಿನದವರೆಗೆ ಸಮಯ ಕೊಟ್ಟಿದ್ದಾರೆ. 15 ದಿನದೊಳಗೆ ನಾನು ಸ್ಟೇ ತರುತ್ತೇನೆ ಎಂದು ಚೇತನ್ ತಿಳಿಸಿದರು.










