ಸುಕೇಶ್ ಚಂದ್ರಶೇಖರ್ ವಂಚನೆ ಪ್ರಕರಣದಲ್ಲಿ ಬಾಲಿವುಡ್ ನಟಿಯರಾದ ಜಾಕ್ವೆಲಿನ್ ಫರ್ನಾಂಡಿಸ್, ಹಾಗೂ ನೋರಾ ಫತೇಹಿ ಹೆಸರು ಕೇಳಿ ಬಂದಿತ್ತು. ಜಾರಿ ನಿರ್ದೇಶನಾಲಯ ಕೂಡ ಇಬ್ಬರನ್ನೂ ಕರೆಯಿಸಿ ವಿಚಾರಣೆಗೆ ಒಳಪಡಿಸಿತ್ತು. ಇದೀಗ ಜಾಕ್ವೆಲಿನ್ ಫರ್ನಾಂಡಿಸ್ ವಿರುದ್ಧ ನೋರಾ ಫತೇಹಿ ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ.
ಜಾಕ್ವೆಲಿನ್ ಫರ್ನಾಂಡಿಸ್ ಅವರು ದುರುದ್ದೇಶಪೂರಿತ ಕಾರಣಗಳನ್ನು ನೀಡಿ ತನ್ನ ವಿರುದ್ಧ ಮಾನಹಾನಿಕರ ಆರೋಪಗಳನ್ನು ಮಾಡುತ್ತಿದ್ದಾರೆ ಎಂದು ನೋರಾ ಫತೇಹಿ ಆರೋಪಿಸಿದ್ದಾರೆ.
ನೋರಾ ಫತೇಹಿ ಮತ್ತು ಜಾಕ್ವೆಲಿನ್ ಫರ್ನಾಂಡಿಸ್ ಮೂಲತಃ ವಿದೇಶಿಗರಾಗಿದ್ದು, ಇಬ್ಬರೂ ಬಾಲಿವುಡ್ ಇಂಡಸ್ಟ್ರಿಯಲ್ಲಿ ತಮ್ಮದೆ ಚಾರ್ಮ್ ಮೂಡಿಸಿದ್ದಾರೆ. ಆದರೆ ಜಾಕ್ವೆಲಿನ್ ಫರ್ನಾಂಡಿಸ್ ಅವರು ತಮ್ಮ ಸ್ವಹಿತಾಸಕ್ತಿಗಳನ್ನು ಸಾಧಿಸುವ ಸಲುವಾಗಿ ತಮ್ಮ ಸಹ ಕಲಾವಿದರ ವೃತ್ತಿಜೀವನವನ್ನು ಹಾನಿ ಮಾಡುತ್ತಿದ್ದಾರೆ ಎಂದು ನೋರಾ ಫತೇಹಿ ಅವರು ಮನವಿಯಲ್ಲಿ ಉಲೇಖಿಸಿದ್ದಾರೆ.
ಈಗಾಗಲೇ ಹಲವು ಬಾರಿ ಈ ನಟಿಯರನ್ನು ಜಾರಿ ನಿರ್ದೇಶನಾಲಯವು ವಿಚಾರಣೆಗಾಗಿ ಕರೆದಿದೆ. ಆದರೆ, ಈ ಕೇಸ್ ಗೂ ತಮಗೂ ಯಾವುದೇ ಸಂಬಂಧವಿಲ್ಲ ಎಂದು ನಟಿಯರು ಹೇಳಿಕೆ ಕೊಡುತ್ತಲೇ ಬಂದಿದ್ದಾರೆ. ಸುಕೇಶ್ ತಮಗೆ ನೇರವಾಗಿ ಪರಿಚಯವೇ ಇಲ್ಲವೆಂದು ನೋರಾ ಹೇಳಿದ್ದರೆ, ಅವನಿಂದ ಯಾವುದೇ ಉಡುಗೊರೆ ಪಡೆದಿಲ್ಲ ಎಂದು ಜಾಕ್ವೆಲಿನ್ ವಾದಿಸಿದ್ದಾರೆ. ಆದರೆ ಜಾರಿ ನಿರ್ದೇಶನಾಲಯವು ಇಬ್ಬರ ಮೇಲೂ ಗುರುತರ ಆರೋಪ ಮಾಡಿ ಜಾರ್ಜ್ ಶೀಟ್ ಕೂಡ ಸಲ್ಲಿಸಿದೆ.










