ಬೆಳಗಾವಿ : ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಯುವತಿ ಪೋಷಕರು ಮಾಧ್ಯಮಗಳ ಜೊತೆ ಮಾತನಾಡಿದರು. ನಮ್ಮ ಮಗಳು ಸಿಡಿ ಗ್ಯಾಂಗ್ ಒತ್ತಡದಲ್ಲಿದ್ದಾಳೆ. ಈಗ ಒತ್ತಡದಲ್ಲಿರುವ ಕಾರಣ ಅವಳು ಸರಿಯಾದ ಹೇಳಿಕೆ ನೀಡದಿರುವ ಸಾಧ್ಯತೆ ಇದೆ ಹೀಗಾಗಿ ಆಕೆಯ ಹೇಳಿಕೆಗಳನ್ನು ಪರಿಗಣಿಸಬಾರದು ಎಂದು ಪೋಷಕರು ಮನವಿ ಮಾಡಿದ್ದಾರೆ.
ನಾನು ಮಾಜಿ ಸೈನಿಕ, ನನ್ನ ಮಗಳನ್ನು ರಕ್ಷಿಸಿಕೊಳ್ಳುವುದು ನನಗೆ ಗೊತ್ತಿದೆ. ನಾವು ಯಾವುದೇ ಒತ್ತಡದಲ್ಲಿಲ್ಲ. ನಮ್ಮ ಮಗಳನ್ನ ಮುಂದಿಟ್ಟುಕೊಂಡು ರಾಜಕಾರಣ ಮಾಡುತ್ತಿದ್ದಾರೆ. ಒತ್ತಡದಿಂದ ಹೊರ ಬಂದ ಮೇಲೆ ಮಗಳ ಹೇಳಿಕೆ ಪಡೆಯಿರಿ. ಅವಳು ನಮ್ಮ ಜೊತೆ ಇರಲು ಇಷ್ಟವಿದ್ರೆ ಬರಲಿ, ನಮ್ಮ ಜೊತೆಯಿರುವುದಕ್ಕೆ ಇಷ್ಟವಿಲ್ಲವೆಂದರೆ ನ್ಯಾಯಾಧೀಶರ ಮುಂದೆ ಹಾಜರಾಗಲಿ. ಏನೇ ಆದ್ರೂ ಅವಳು ನನ್ನ ಮಗಳು. ರಾಜಕೀಯ ನಾಯಕರು ನನ್ನ ಮಗಳನ್ನು ದಾಳವಾಗಿ ಬಳಸಿಕೊಳ್ಳುತ್ತಿದ್ದಾರೆ ಎಂದು ಯುವತಿ ತಂದೆ ಗಂಭೀರ ಆರೋಪ ಮಾಡಿದ್ದಾರೆ.
ಇದೇ ವೇಳೆ ಯುವತಿಯ ಸಹೋದರ ಮಾತನಾಡಿ, ಇದಕ್ಕೆಲ್ಲಾ ಡಿ.ಕೆ.ಶಿಯವರೇ ನೇರ ಕಾರಣ. ಅವರು ಕೊಟ್ಟ ಹಣದಿಂದಲೇ ಅಕ್ಕ ಗೋವಾಗೆ ಹೋಗುತ್ತಿರೋದಾಗಿ ಹೇಳಿದ್ದಳು. ಆಡಿಯೋ ಕ್ಲಿಪ್ ಬೇಕಾದ್ರೆ ನಿಮಗೆಲ್ಲರಿಗೂ ತೋರಿಸುತ್ತೇನೆ. ಅಕ್ಕನಿಗೆ ಎಷ್ಟು ಕಷ್ಟ ಕೊಟ್ಟಿದ್ದಾರೋ ಗೊತ್ತಿಲ್ಲ. ಅವಳಿಗೆ 4-5 ದಿನ ಸಮಯಾವಕಾಶ ನೀಡಬೇಕು ಎಂದು ಮನವಿ ಮಾಡಿದ್ದಾರೆ.










