ನನ್ನ ಹೆಸರೇಳಿಕೊಂಡು ಕೂರಬೇಡಿ : ರಾಜ್ಯ ಬಿಜೆಪಿ ನಾಯಕರಿಗೆ ಮೋದಿ ಎಚ್ಚರಿಕೆ ಸಂದೇಶ…

66
firstsuddi

ನವದೆಹಲಿ : 2024ರ ಚುನಾವಣೆಗೆ ಇನ್ನೂ 400 ದಿನ ಬಾಕಿ ಇದೆ. ನಿನ್ನೆ ದೆಹಲಿಯಲ್ಲಿ ನಡೆದ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿಯ ಸಮಾರೋಪದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಕಮಲ ಪಡೆಗೆ ‘ಚುನಾವಣೆ ಅಡಿಪಾಯದ ಕಿವಿಮಾತು’ ಹೇಳಿದ್ದಾರೆ. ಮೋದಿ ಭ್ರಮೆ ಬೇಡ, ಮೋದಿ ಹೆಸರೇಳಿಕೊಂಡು ಕೂರಬೇಡಿ ಎಂದು ಎಚ್ಚರಿಕೆ ಕೊಟ್ಟಿದ್ದಾರೆ.

ಅಂದಹಾಗೆ ಕರ್ನಾಟಕ ಸೇರಿದಂತೆ ಮುಂಬರುವ ಚುನಾವಣೆಗಳ ತಂತ್ರಗಾರಿಕೆಯನ್ನು ಪ್ರಧಾನಿ ನರೇಂದ್ರ ಮೋದಿ ಬದಲಿಸುವ ಸುಳಿವು ಎನ್ನಲಾಗಿದೆ. 2024ರ ಲೋಕಸಭೆ ಚುನಾವಣೆಗೂ ಮುನ್ನ ಒಟ್ಟು 9 ರಾಜ್ಯಗಳಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದೆ. ಮೇಘಾಲಯ, ನಾಗಲ್ಯಾಂಡ್, ತ್ರಿಪುರ ಬಳಿಕ ಕರ್ನಾಟಕದಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದೆ. ಕರ್ನಾಟಕದ ಬಳಿಕ ಮಿಝೋರಾಂ, ಛತ್ತೀಸ್ ಗಢ್, ಮಧ್ಯಪ್ರದೇಶ, ರಾಜಸ್ಥಾನ, ತೆಲಂಗಾಣ ರಾಜ್ಯಗಳಲ್ಲಿ ಚುನಾವಣೆ ನಡೆಯಲಿದೆ. ಆದ್ರೆ 25 ಸಂಸದರನ್ನು ಕೊಟ್ಟಿರುವ ಕರ್ನಾಟಕದ ಬಗ್ಗೆ ಬಿಜೆಪಿ ಹೈಕಮಾಂಡ್ ಗೆ ಮೊದಲ ಸವಾಲಾಗಿದೆ. ಈ ನಡುವೆ ಕರ್ನಾಟಕ ಚುನಾವಣೆಯಲ್ಲೂ ಹೆಚ್ಚಾಗಿ ಪ್ರಧಾನಿ ನರೇಂದ್ರ ಮೋದಿಯನ್ನೇ ನಂಬಿಕೊಂಡಿದ್ದಾರೆ. ಮೋದಿ ಅವರ ಎಚ್ಚರಿಕೆಯ ಸಂದೇಶದಿಂದ ರಾಜ್ಯ ನಾಯಕರು ತಮ್ಮ ಕಾರ್ಯಶೈಲಿಯನ್ನು ಬದಲಿಸಿಕೊಳ್ಳಬೇಕಾದ ಅನಿವಾರ್ಯತೆ ಇದೆ.

ರಾಷ್ಟ್ರೀಯ ಕಾರ್ಯಕಾರಿಣಿಯಲ್ಲಿ ಕೈಗೊಳ್ಳಲಾಗಿರುವ ತೀರ್ಮಾನದಂತೆ 2024ರ ಜೂನ್ ವರೆಗೆ ಬಿಜೆಪಿ ಅಧ್ಯಕ್ಷರಾಗಿ ಜೆ.ಪಿ. ನಡ್ಡಾ ಮುಂದುವರಿಯಲಿದ್ದಾರೆ. ಈ ಮೂಲಕ ಮಾಜಿ ಅಧ್ಯಕ್ಷ ಅಮಿತ್ ಶಾ ಮಾದರಿಯಲ್ಲಿಯೇ ನಡ್ಡಾ ಅವರು ಕೂಡ 2024ರ ಲೋಕಸಭೆ ಚುನಾವಣೆ ಮುಗಿಯುವವರೆಗೂ ಬಿಜೆಪಿಯ ಅಧ್ಯಕ್ಷ ಚುಕ್ಕಾಣಿ ಹಿಡಿಯಲಿದ್ದಾರೆ. 2019ರಲ್ಲಿ ಕೂಡ ಅಮಿತ್ ಶಾ ಅವರ ಅಧ್ಯಕ್ಷೀಯ ಅವಧಿ ಮುಕ್ತಾಯಗೊಂಡಿದ್ದರೂ ಕೂಡ, ಸಾರ್ವತ್ರಿಕ ಚುನಾವಣೆಯ ದೃಷ್ಟಿಯಿಂದ ಅವರನ್ನು ಅಧ್ಯಕ್ಷ ಸ್ಥಾನದಲ್ಲಿ ಮುಂದುವರಿಸಲಾಗಿತ್ತು.

ನಡ್ಡಾ ಅವರ ಅಧ್ಯಕ್ಷತೆಯಲ್ಲಿ ಬಿಜೆಪಿಯು ಅಸ್ಸಾಂ, ಮಣಿಪುರ, ಉತ್ತರಾಖಂಡ ಹಾಗೂ ಉತ್ತರಪ್ರದೇಶ, ಗುಜರಾತ್ ವಿಧಾನಸಭೆ ಚುನಾವಣೆಯಲ್ಲಿ ಜಯ ಗಳಿಸಿರುವುದು ಗಮನಾರ್ಹ. ಜೊತೆಗೆ, 120 ವಿಧಾನಸಭೆ ಉಪ ಚುನಾವಣೆಗಳ ಪೈಕಿ 73 ರಲ್ಲಿ ಕಮಲ ಅರಳಿದೆ.