ನಮ್ಮ ಮೆಟ್ರೋ ಟ್ರ್ಯಾಕ್‌ಗೆ ಜಿಗಿದು ಯುವಕ ಆತ್ಮಹತ್ಯೆ…

44
firstsuddi

ಬೆಂಗಳೂರು: ನಮ್ಮ ಮೆಟ್ರೋ ಟ್ರ್ಯಾಕ್‌ಗೆ ಜಿಗಿದು ಯುವಕನೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಇಂದು ಮಧ್ಯಾಹ್ನ 2:10ರ ಸುಮಾರಿಗೆ ಅತ್ತಿಗುಪ್ಪೆ ಮೆಟ್ರೋ ನಿಲ್ದಾಣದಲ್ಲಿ ನಡೆದಿದೆ.

ಆತ್ಮಹತ್ಯೆ ಮಾಡಿಕೊಂಡ ಯುವಕನನನ್ನು ಧ್ರುವ್ ಟಕ್ಕರ್ ಎಂದು ಗುರುತಿಸಲಾಗಿದ್ದು, ಆತನ ಕುಟುಂಬಕ್ಕೆ ಮತ್ತು ಕಾಲೇಜಿಗೆ ಪೊಲೀಸರು ಮಾಹಿತಿ ನೀಡಿದ್ದಾರೆ.

ಮೆಟ್ರೋ ರೈಲು ಬರುವ ಹಲವು ನಿಮಿಷಗಳ ಕಾಲ ಮೊದಲೇ ಧ್ರುವ್ ಟಕ್ಕರ್ ಅತ್ತಿಗುಪ್ಪೆ ನಿಲ್ದಾಣಕ್ಕೆ ಬಂದಿದ್ದ. ನಂತರ ನಿಲ್ದಾಣದ ಬಲ ಭಾಗದ ತುದಿಗೆ ಹೋಗಿ ನಿಂತಿದ್ದ. ಧ್ರುವ್ ಟಕ್ಕರ್ ಜೊತೆಗೆ ಓರ್ವ ಯುವತಿ ಹಾಗೂ ಮತ್ತೊರ್ವ ಯುವಕ ಇದ್ದ. ಹಾಗೇ ಮೂವರು ಮಾತನಾಡುತ್ತಾ ನಿಂತಿದ್ದರು. ನಂತರ ರೈಲು ಬರುವ ಸಮಯದಲ್ಲಿ, ಧ್ರುವ್ ಟ್ರಾಕ್ ಮೇಲೆ ಹಾರಿದ್ದಾನೆ. ಜೊತೆಗಿದ್ದವರು ಎಳೆದುಕೊಳ್ಳುವ ಪ್ರಯತ್ನ ಮಾಡಿದ್ದಾರೆ. ಆದ್ರೆ ರೈಲು ಹತ್ತಿರ ಬಂದಾಗ ಸ್ಥಳದಿಂದ ಓಡಿ ಹೋಗಿದ್ದಾರೆ. ಪರಿಣಾಮ ಅತ್ತಿಗುಪ್ಪೆ ಮೆಟ್ರೋ ನಿಲ್ದಾಣದಿಂದ ಸುಮಾರು ಎಂಟು ಅಡಿ ದೂರದಲ್ಲಿ ಯುವಕನ ದೇಹವನ್ನು ರೈಲು ಎಳೆದೊಯ್ದಿದ್ದು, ರುಂಡ-ಮುಂಡ ಬೇರೆ-ಬೇರೆಯಾಗಿದೆ. ರೈಲಿನ ಕೆಳಗೆ ಸಿಲುಕಿದ್ದ ಮೃತದೇಹವನ್ನು ಹೊರಗೆ ತೆಗೆದು ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಲಾಗಿದೆ.

ಮೆಟ್ರೋ ಹಳಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ ಕಾರಣಕ್ಕೆ ಮೆಟ್ರೋ ಸಂಚಾರದಲ್ಲಿ ವ್ಯತ್ಯಯ ಉಂಟಾಗಿದೆ. ಕೂಡಲೇ ಸಿಬ್ಬಂದಿ ಮೆಟ್ರೋದಿಂದ ಎಲ್ಲ ಪ್ರಯಾಣಿಕರನ್ನು ಇಳಿಸಿದ್ದಾರೆ. ಸದ್ಯ ಅತ್ತಿಗುಪ್ಪೆ ನಿಲ್ದಾಣದಲ್ಲಿ ರೈಲು ಓಡಾಟ ಸ್ಥಗಿತವಾಗಿದ್ದು, ಮಾಗಡಿ ರೋಡ್‌ನಿಂದ ವೈಟ್ ಫೀಲ್ಡ್‌ವರೆಗೆ ಮಾತ್ರ ಮೆಟ್ರೋ ಸಂಚಾರ ಇದೆ. ಮಾಗಡಿ ರಸ್ತೆಯಿಂದ ಚಲ್ಲಘಟ್ಟದವರೆಗೆ ಯಾವುದೇ ಸೇವೆ ಇಲ್ಲ ಎಂದು ನಮ್ಮ ಮೆಟ್ರೋ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಸ್ಥಳಕ್ಕೆ ವಿಜಯನಗರ ಪೊಲೀಸರು ಹಾಗೂ ಬಿಎಂಆರ್‌ಸಿಎಲ್‌ನ ಹಿರಿಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.