ನವರಸನಾಯಕ ಜಗ್ಗೇಶ್‍ಗೆ ಹುಟ್ಟುಹಬ್ಬದ ಶುಭಾಶಯ ಹೇಳಿದ ಚಾಲೆಂಜಿಂಗ್ ಸ್ಟಾರ್..!

86

ನವರಸ ನಾಯಕ ಜಗ್ಗೇಶ್ ಅವರು ಇಂದು 58 ನೇ ವಸಂತಕ್ಕೆ ಕಾಲಿಟ್ಟಿದ್ದು, ಸ್ಯಾಂಡಲ್ ವುಡ್ ಗಣ್ಯರು, ಅಭಿಮಾನಿಗಳು ನಿನ್ನೆ ರಾತ್ರಿಯಿಂದಲೇ ತಮ್ಮ ನೆಚ್ಚಿನ ನಟನಿಗೆ ಹುಟ್ಟುಹಬ್ಬದ ಶುಭಾಶಯ ಕೋರುತ್ತಿದ್ದಾರೆ. ಇತ್ತ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಕೂಡಾ ಜಗ್ಗೇಶ್ ಹುಟ್ಟುಹಬ್ಬಕ್ಕೆ ಶುಭ ಕೋರಿದ್ದಾರೆ. ತಮ್ಮ ಫೇಸ್ ಬುಕ್ ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡ ನಟ ದರ್ಶನ್ ಅವರು “ಹುಟ್ಟುಹಬ್ಬದ ಶುಭಾಶಯಗಳು ಜಗ್ಗೇಶ್ ಅಣ್ಣ” ಎಂದು ಬರೆದುಕೊಂಡಿದ್ದಾರೆ.

ಕೆಲವು ದಿನಗಳ ಹಿಂದೆ ಜಗ್ಗೇಶ್ ಅವರು ಮಾತನಾಡಿರುವ ಆಡಿಯೋವೊಂದು ವೈರಲ್ ಆಗಿ ಹಲವು ವಿವಾದಕ್ಕೆ ಕಾರಣವಾಗಿತ್ತು. ಆ ಸಮಯದಲ್ಲಿ ದರ್ಶನ್ ಅವರ ಅಭಿಮಾನಿಗಳು ಮೈಸೂರಿನಲ್ಲಿ ‘ತೋತಾಪುರಿ’ ಸಿನಿಮಾದ ಚಿತ್ರೀಕರಣದ ವೇಳೆ ಜಗ್ಗೇಶ್ ಗೆ ಧಮ್ಕಿ ಹಾಕಿದ್ದರು. ದರ್ಶನ್ ಅವರನ್ನು ಕ್ಷಮೆ ಕೇಳಲೇಬೇಕು ಎಂದು ಪಟ್ಟು ಹಿಡಿದಿದ್ದರು. ನಾನು ತಪ್ಪು ಮಾಡಿಲ್ಲ ಎಂದು ಜಗ್ಗೇಶ್ ಅವರು ಹೇಳಿದರೂ ಕೊನೆಗೆ ಕ್ಷಮೆ ಕೇಳಿದ್ದರು. ಈ ಘಟನೆ ಬಳಿಕ ಇನ್ನು ಜಗ್ಗೇಶ್ ಹಾಗೂ ದರ್ಶನ್ ಅವರ ಬಾಂಧವ್ಯ ಇಲ್ಲಿಗೆ ಮುಗಿಯಿತು ಎಂಬ ಮಾತುಗಳು ಕೇಳಿ ಬಂದಿದ್ದವು. ಆದರೆ ಇದೀಗ ದರ್ಶನ್ ಅವರು ಜಗ್ಗೇಶ್ ಅವರಿಗೆ ಶುಭಾಶಯ ಕೋರಿರುವುದು ಅಭಿಮಾನಿಗಳಲ್ಲಿ ಖುಷಿ ಉಂಟು ಮಾಡಿದೆ.