ಚಿಕ್ಕಮಗಳೂರು : ಇಂದಿನ ಪೀಳಿಗೆಯ ಮಕ್ಕಳು ಭಾರತ ಸೇವಾದಳದ ಸಂಸ್ಥಾಪಕ ನಾ.ಸು.ಹರ್ಡೀಕರ್ ಅವರ ಆದರ್ಶಗಳನ್ನು ಮೈಗೂಡಿಸಿಕೊಂಡು ಬೆಳೆಯಬೇಕು ಎಂದು ಸೇವಾದಳದ ಜಿಲ್ಲಾ ಉಪಾಧ್ಯಕ್ಷ ಎಸ್.ವಿ.ಬಸವರಾಜಪ್ಪ ಸಲಹೆ ನೀಡಿದರು.
ನಗರದ ಆಜಾದ್ ಪಾರ್ಕ್ ಸರ್ಕಾರಿ ಹಿರಿಯ ಪ್ರಾಥಮಿಕ ಕನ್ನಡ ಶಾಲೆಯಲ್ಲಿ ಭಾರತ ಸೇವಾದಳದ ತಾಲ್ಲೂಕು ಸಮಿತಿ ಮತ್ತು ಜ್ಞಾನಜ್ಯೋತಿ ಘಟಕ ಆಯೋಜಿಸಿರುವ ಸೇವಾದಳ ಸಪ್ತಾಹಕ್ಕೆ ಬುಧವಾರ ಚಾಲನೆ ನೀಡಿ ಅವರು ಮಾತನಾಡಿದರು.
ಭಾರತ ಸೇವಾದಳದ ಸಂಸ್ಥಾಪಕ ನಾ.ಸು.ಹರ್ಡಿಕರ್ ಅವರು ಕಿತ್ತು ತಿನ್ನುವ ಬಡತನದ ನಡುವೆ ದೇಶದ ಸ್ವಾತಂತ್ರ್ಯಕ್ಕಾಗಿ ಅನೇಕ ರೀತಿಯ ಹೋರಾಟಗಳನ್ನು ಮಾಡಿದರು. ರಾಷ್ಟ್ರದ ದಾಸ್ಯ ವಿಮೋಚನೆಗಾಗಿ ಜೈಲು ವಾಸವನ್ನೂ ಅನುಭವಿಸಿದರು ಎಂದರು.
ದೇಶದ ಸ್ವಾತಂತ್ರ್ಯಕ್ಕಾಗಿ ತಮ್ಮ ಸರ್ವಸ್ವವನ್ನೂ ತ್ಯಾಗ ಮಾಡಿದ ಹರ್ಡಿಕರ್ ಅವರು ಸ್ವಾತಂತ್ರ್ಯ ನಂತರ ಜನತೆಯಲ್ಲಿ ಭಾವೈಕ್ಯತೆಯನ್ನು ಬೆಳೆಸುವ ನಿಟ್ಟಿನಲ್ಲಿ ಭಾರತ ಸೇವಾದಳ ಸೇರಿದಂತೆ ಅನೇಕ ಸಂಘಟನೆ ಮತ್ತು ಸಂಸ್ಥೆಗಳನ್ನು ಸ್ಥಾಪಿಸಿದರು ಎಂದು ಹೇಳಿದರು.
ಇಂದಿನ ಪೀಳಿಗೆಯ ಮಕ್ಕಳಲ್ಲಿ ರಾಷ್ಟ್ರಭಕ್ತಿ, ದೇಶಪ್ರೇಮ ಮತ್ತು ಭಾವೈಕ್ಯತೆಯನ್ನು ಬೆಳೆಸುವ ನಿಟ್ಟಿನಲ್ಲಿ ಅವರಿಗೆ ಶಾಲೆಗಳಲ್ಲಿ ಶಿಕ್ಷಕರು ನಾ.ಸು.ಹರ್ಡಿಕರ್ ಅವರ ಪುಸ್ತಕಗಳನ್ನು ಪ್ರತಿದಿನ ಓದಲು ನೀಡಬೇಕು ಎಂದು ತಿಳಿಸಿದರು.
ಭಾರತ ಸೇವಾದಳದ ತಾಲ್ಲೂಕು ಉಪಾಧ್ಯಕ್ಷ ಕಾಳಯ್ಯ ಮಾತನಾಡಿ ನಾವೆಲ್ಲರೂ ಒಂದು ಎಂಬ ಭಾವನೆ ಎಲ್ಲರಲ್ಲೂ ಮೂಡಿ ಭಾವೈಕ್ಯತೆ ಬೆಳೆದಾಗ ಮಾತ್ರ ಸಮಾಜದಲ್ಲಿ ಶಾಂತಿ, ನೆಮ್ಮದಿ ನೆಲೆಸುತ್ತದೆ ಎಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಸೇವಾದಳದ ತಾಲ್ಲೂಕು ಸಂಘಟಕ ಎಸ್.ಈ.ಲೋಕೇಶ್ವರಾಚಾರ್ ಸಪ್ತಾಹದ ಅಂಗವಾಗಿ ಒಂದು ವಾರಗಳ ಕಾಲ ವಿವಿಧ ಶಾಲೆಯ ವಿದ್ಯಾರ್ಥಿಗಳಿಗೆ ವಿವಿಧ ಸ್ಪರ್ಧೆಗಳನ್ನು ನಡೆಸಲಾಗುವುದು, ವಿಜೇತರಿಗೆ ಸಮಾರೋಪದಲ್ಲಿ ಬಹುಮಾನ ವಿತರಿಸಲಾಗುವುದು ಎಂದು ಹೇಳಿದರು.
ಭಾರತ ಸೇವಾದಳದ ಜಿಲ್ಲಾ ಸಂಘಟಕ ಚಂದ್ರಕಾಂತ, ತಾಲ್ಲೂಕು ಕಾರ್ಯದರ್ಶಿ ಮಹೇಶಪ್ಪ, ಶಿಕ್ಷಕರಾದ ನಾಗರತ್ನ, ಜಯಂತಿ, ಪಶುವೈದ್ಯ ಇಲಾಖೆಯ ನಿವೃತ್ತ ಅಧಿಕಾರಿ ರಾಮಚಂದ್ರಮೂರ್ತಿ ಉಪಸ್ಥಿತರಿದ್ದರು.










