ಚಿಕ್ಕಬಳ್ಳಾಪುರ : ನಿಂತಿದ್ದ ಕಾರಿಗೆ ಕ್ಯಾಂಟರ್ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಶಬರಿಮಲೆ ಯಾತ್ರಿಗಳು ಸಾವನ್ನಪ್ಪಿರುವ ಘಟನೆ ತಾಲೂಕಿನ ರಾಷ್ಟ್ರೀಯ ಹೆದ್ದಾರಿ 44ರ ದೊಡ್ಡಪ್ಯಾಯಲಗುರ್ಕಿ ಬಳಿ ಸಂಭವಿಸಿದೆ.
ಧರಣೀಶ್(22) ನಿರಂಜನ್ ಸಿಂಗ್(54) ಮೃತ ದುರ್ದೈವಿಗಳು. ಮೃತರಿಬ್ಬರನ್ನು ಆಂಧ್ರ ಮೂಲದ ಗುಂತಕಲ್ ನಿವಾಸಿಗಳೆಂದು ಗುರುತಿಸಲಾಗಿದೆ. ಅಯ್ಯಪ್ಪ ಸ್ವಾಮಿಯ ದರ್ಶನ ಪಡೆದು ಪಾಪಸ್ ಬರುವಾಗ ಕಾರು ಅಪಘಾತಕ್ಕೀಡಾಗಿದೆ.
ಕೇರಳದ ಶಬರಿಮಲೆಯಿಂದ ಆಂಧ್ರಕ್ಕೆ ವಾಪಾಸ್ಸಾಗುತ್ತಿದ್ದರು. ಈ ವೇಳೆ ಕಾರು ಪಂಕ್ಚರ್ ಆಗಿ ಹೆದ್ದಾರಿ ಮಧ್ಯೆ ನಿಂತಿತ್ತು. ಈ ಕಾರಿನಲ್ಲಿ ಒಟ್ಟು 5 ಮಂದಿ ಪ್ರಯಾಣಿಸುತ್ತಿದ್ದರು. ಪಂಕ್ಚರ್ ಆದ ಕಾರಿನಿಂದ ನಾಲ್ವರು ಕೆಳಗೆ ಇಳಿದಿದ್ದು, ನಿರಂಜನ್ ಸಿಂಗ್ ಕಾರಲ್ಲೇ ನಿದ್ದೆ ಮಾಡುತ್ತಿದ್ದರು. ಧರಣೀಶ್ ಪಂಚರ್ ಆಗಿದ್ದ ಕಾರಿನ ಸ್ಟೆಪ್ನಿ ಬದಲಾಯಿಸುತ್ತಿದ್ದ ವೇಳೆ ಅತಿ ವೇಗವಾಗಿ ಬಂದ ಕ್ಯಾಂಟರ್ ನಿಂತಿದ್ದ ಕಾರ್ ಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಕಾರಿನಲ್ಲಿದ್ದ ನಿರಂಜನ್ ಸಿಂಗ್ ಹಾಗೂ ಧರಣೀಶ್ ಮೃತಪಟ್ಟಿದ್ದಾರೆ.
ಸುದ್ದಿ ತಿಳಿದ ಪೇರೆಂಸಂದ್ರ ಠಾಣೆ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ಪೇರೇಸಂದ್ರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.










