ದಾವಣಗೆರೆ : ಪತಿಯ ಮನೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ನವ ವಿವಾಹಿತೆಯ ಮೃತದೇಹ ಪತ್ತೆಯಾಗಿರುವ ಘಟನೆ ಜಿಲ್ಲೆಯಲ್ಲಿ ನಡೆದಿದೆ.
ಕಳೆದ ಡಿಸೆಂಬರ್ 10ರಂದು ಜಿಲ್ಲೆಯ ಹೊಸ ಕುಂದವಾಡ ಗ್ರಾಮದ ನಿವಾಸಿ ರೂಪಾಗೆ (25) ದಾವಣಗೆರೆ ತಾಲ್ಲೂಕಿನ ಹನುಮನಹಳ್ಳಿ ಗ್ರಾಮದ ಯುವಕ ಜಯಪ್ರಕಾಶ್ ಜೊತೆ ಮದುವೆಯಾಗಿತ್ತು. ಯುವತಿಯ ಪೋಷಕರು ಹತ್ತು ತೊಲೆ ಬಂಗಾರದ ಒಡವೆ, ಲಕ್ಷಾಂತರ ರೂಪಾಯಿ ಹಣವನ್ನು ವರದಕ್ಷಿಣೆಯಾಗಿ ನೀಡಿ, ಅದ್ದೂರಿಯಾಗಿ ಮಗಳ ಮದುವೆ ಮಾಡಿದ್ದರು. ಆದರೆ ಮದುವೆಯಾಗಿ ಆರು ತಿಂಗಳ ಬಳಿಕ ಜಯಪ್ರಕಾಶ್ ರೂಪಾ ಮೇಲೆ ಅನುಮಾನ ಪಡಲು ಆರಂಭಿಸಿದ್ದ, ಅಲ್ಲದೇ ವರದಕ್ಷಿಣೆ ಕಿರುಕುಳ ನೀಡುತ್ತಿದ್ದ ಎನ್ನಲಾಗಿದೆ.
ರೂಪಾ ಪೋಷಕರಿಗೆ ಕರೆ ಮಾಡಿ, ನನ್ನ ಪತಿ ಬೇರೊಬ್ಬನ ಜೊತೆ ಮಾತನಾಡುತ್ತಿದ್ದೀಯಾ ಎಂದು ಆರೋಪ ಮಾಡುತ್ತಿದ್ದಾರೆ. ಅನುಮಾನ ಪಡುತ್ತಿದ್ದಾರೆ. ಆದರೆ ನಾನು ಯಾವುದೇ ಕಾರಣಕ್ಕೂ ಸಾಯುವುದಿಲ್ಲ. ಧೈರ್ಯವಾಗಿ ಎಲ್ಲವನ್ನು ಎದುರಿಸಿ ನನ್ನ ಕಳಂಕವನ್ನು ನಾನೇ ತೊಳೆದುಕೊಳ್ಳುತ್ತೇನೆ ಎಂದು ತಾಯಿ ನಿರ್ಮಲಾಗೆ ಕರೆ ಮಾಡಿ ಹೇಳಿದ್ದಳಂತೆ. ವರದಕ್ಷಿಣೆ ಕಿರುಕುಳ ಹಾಗೂ ಅನುಮಾನದಿಂದ ನಮ್ಮ ಮಗಳನ್ನು ಕೊಲೆ ಮಾಡಿ ನೇಣು ಹಾಕಿದ್ದಾರೆ ಎಂದು ಮೃತಳ ಪೋಷಕರು ಆರೋಪ ಮಾಡಿದ್ದಾರೆ.
ಇನ್ನೂ ತಹಶೀಲ್ದಾರ್ ಗಿರೀಶ್ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ಮಾಯಕೊಂಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.










