ಚಂಡೀಗಢ : 34 ವರ್ಷದ ಹಿಂದಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಕ್ರಿಕೆಟಿಗ – ರಾಜಕಾರಣಿ ನವಜೋತ್ ಸಿಂಗ್ ಸಿಧು ಅವರಿಗೆ ಸುಪ್ರೀಂ ಕೋರ್ಟ್ ಒಂದು ವರ್ಷ ಜೈಲು ಶಿಕ್ಷೆ ವಿಧಿಸಿದೆ. ಇದರ ಬೆನ್ನಲ್ಲೇ ಸಿಧು ನ್ಯಾಯಾಲಯಕ್ಕೆ ಶರಣಾಗಿದ್ದಾರೆ.
ಇಂದು ಬೆಳಗ್ಗೆ ನ್ಯಾಯಾಲಯದ ಮುಂದೆ ಶರಣಾಗಲು ಕೆಲವು ವಾರಗಳ ಸಮಯಬೇಕು ಎಂದು ಸಿಧು ಸುಪ್ರೀಂ ಕೋರ್ಟ್ ನಲ್ಲಿ ಮನವಿ ಮಾಡಿದ್ದರು. ಇದೀಗ ಪಟಿಯಾಲ ನ್ಯಾಯಾಲಯಕ್ಕೆ ಕಾರಿನಲ್ಲಿ ಆಗಮಿಸಿದ ಸಿಧು ಮುಖ್ಯ ನ್ಯಾಯಾಧೀಶರ ಮುಂದೆ ಶರಣಾಗಿದ್ದಾರೆ. ವೈದ್ಯಕೀಯ ಪರೀಕ್ಷೆ ನಡೆಸಿ, ಅವರನ್ನ ಪೊಲೀಸರ ವಶಕ್ಕೆ ನೀಡುವ ಸಾಧ್ಯತೆ ಇದೆ.
1988ರ ರೋಡ್ ರೇಜ್ ಪ್ರಕರಣಕ್ಕೆ ಸಂಬಂಧಿಸಿದಂತೆ ಬರೋಬ್ಬರಿ 34 ವರ್ಷಗಳ ನಂತರ ಮಾಜಿ ಕ್ರಿಕೆಟಿಗ – ರಾಜಕಾರಣಿ ನವಜೋತ್ ಸಿಂಗ್ ಸಿಧು ಅವರಿಗೆ ಸುಪ್ರೀಂಕೋರ್ಟ್ ನಿನ್ನೆ ಒಂದು ವರ್ಷ ಜೈಲು ಶಿಕ್ಷೆ ವಿಧಿಸಿದೆ. ಪ್ರಕರಣದ ಸುದೀರ್ಘ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಎ.ಎಂ. ಖಾನ್ವಿಲ್ಕರ್ ಮತ್ತು ಎಸ್ಕೆ.ಕೌಲ್ ಅವರಿದ್ದ ಪೀಠ, ರಸ್ತೆಯಲ್ಲಿ ನಡೆದ ಗಲಾಟೆಗೆ ಸಂಬಂಧಿಸಿದಂತೆ ಸಿಧು ಅವರನ್ನು ಆರೋಪ ಮುಕ್ತಗೊಳಿಸಿದ್ದ ಮೇ 2018ರ ಆದೇಶವನ್ನು ಮರುಪರಿಶೀಲಿಸಿ ತೀರ್ಪು ನೀಡಿದೆ.










