ಬಳ್ಳಾರಿ : ನ್ಯಾಯಾಲಯದ ಆವರಣದಲ್ಲೇ ವಕೀಲರೊಬ್ಬರನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ವಿಜಯನಗರ ನೂತನ ಜಿಲ್ಲೆ ಹೊಸಪೇಟೆಯಲ್ಲಿ ನಡೆದಿದೆ.
ವೆಂಕಟೇಶ್(62) ಕೊಲೆಯಾದ ವ್ಯಕ್ತಿಯಾಗಿದ್ದು, ಈತ ಹೊಸಪೇಟೆ ನಗರದ ಕಾಂಗ್ರೆಸ್ ಮುಖಂಡ ಹಾಗೂ ವಕೀಲ. ಈತನನ್ನು ಬೆಳ್ಳಂಬೆಳಗ್ಗೆ ನ್ಯಾಯಾಲಯದ ಆವರಣದಲ್ಲೇ ಮಚ್ಚಿನಿಂದ ಕೊಚ್ಚಿ ವ್ಯಕ್ತಿವೋರ್ವ ಹತ್ಯೆಗೈಯ್ದಿದ್ದಾನೆ.ಈ ಘಟನೆ ಸ್ಥಳೀಯ ನಾಗರಿಕರನ್ನು ಬೆಚ್ಚಿ ಬೀಳಿಸಿದೆ.
ಹೊಸಪೇಟೆಯ ಚಿತ್ತವಾಡ್ಗಿ ನಿವಾಸಿ ತಾರಿಹಳ್ಳಿ ವೆಂಕಟೇಶ್ ಅವರ ಹತ್ಯೆಗೆ ನಿಖರವಾದ ಕಾರಣ ತಿಳಿದು ಬಂದಿಲ್ಲ. ಆದರೆ ಕೌಟುಂಬಿಕ ಕಲಹ ಹಾಗೂ ರಾಜಕೀಯ ದುರುದ್ದೇಶದಿಂದ ಈ ಘಟನೆ ನಡೆದಿರಬಹುದು ಎಂದು ಶಂಕಿಸಲಾಗಿದೆ. ಈ ಹತ್ಯೆಗೆ ಸಂಬಂಧಿಸಿದಂತೆ ಮನೋಜ್ ಎಂಬಾತನನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.










