ಪತ್ನಿಯ ಕಿರುಕುಳಕ್ಕೆ ಬೇಸತ್ತು ಪತಿ ಆತ್ಮಹತ್ಯೆ…

70
firstsuddi

ಬೆಂಗಳೂರು : ಪತ್ನಿಯ ಕಿರುಕುಳಕ್ಕೆ ಬೇಸತ್ತು ಪತಿ ಆತ್ಮಹತ್ಯೆಗೆ ಶರಣಾದ ಘಟನೆ ನಗರದ ಎಂವಿ ಲೇಔಟ್ ಉಲ್ಲಾಳದ ಬಳಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

24 ವರ್ಷದ ಮಹೇಶ್ವರ್ ಆತ್ಮಹತ್ಯೆಗೆ ಶರಣಾದ ನವವಿವಾಹಿತ. ಆಗಸ್ಟ್ 21 ರಂದು ಮಹೇಶ್ವರ್ ಮದುವೆ ಕವನ (22) ಎಂಬಾಕೆ ಜೊತೆ ನಡೆದಿತ್ತು. ಮದುವೆ ಬಳಿಕ ಜೋಡಿ ಬೆಂಗಳೂರಿನ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು. ಐದು ದಿನಗಳ ಹಿಂದೆ ಮನೆಯಲ್ಲಿಯೇ ಮಹೇಶ್ವರ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಮಹೇಶ್ವರನ ತಾಯಿ ರತ್ನಮ್ಮ ನೀಡಿದ ದೂರಿನ ಆಧಾರದಲ್ಲಿ ಜ್ಞಾನಭಾರತಿ ಠಾಣೆಯಲ್ಲಿ ಐಪಿಸಿ ಸೆಕ್ಷನ್ 34(ಏಕೋದ್ದೇಶವನ್ನು ಮುಂದುವರೆಸಲು ಅನೇಕ ವ್ಯಕ್ತಿಗಳೊಂದಿಗೆ ಎಸಗಿದ ಕೃತ್ಯ), 306(ಆತ್ಮಹತ್ಯೆಗೆ ಪ್ರಚೋದನೆ) ಅಡಿ ಕವನ ಮತ್ತು ಆಕೆಯ ಪೋಷಕರಾದ ಆತ್ಮಾನಂದ ಮತ್ತು ಪದ್ಮಾ ವಿರುದ್ಧ ಪ್ರಕರಣ ದಾಖಲಾಗಿದೆ.

ದೂರಿನಲ್ಲಿ ಏನಿದೆ?
ಚನ್ನಪಟ್ಟಣ ತಾಲೂಕಿನ ಕೊಡರು ಗ್ರಾಮದಲ್ಲಿ ನಾನು ನೆಲೆಸಿದ್ದು ಆಗಸ್ಟ್ 21 ರಂದು ಮಗನ ಮದುವೆ ಮದ್ದೂರಿನ ಮದ್ದೂರಮ್ಮ ದೇವಸ್ಥಾನದ ಹಿಂಭಾಗದಲ್ಲಿ ನಡೆದಿದೆ. ವಿವಾಹ ಮಾಡಿದ ಕೆಲವೇ ದಿನಗಳ ನಂತರ ಹೊಂದಾಣಿಕ ಮನಸ್ಥಿತಿ ಇಲ್ಲದ ಕವನ ಪದೇ ಪದೇ ಜಗಳ ಮಾಡುತ್ತಿದ್ದಳು. ಮದುವೆಯಾದ ದಿನದಿಂದಲೂ ದುರಹಂಕಾರದಿಂದ ವರ್ತಿಸುತ್ತಿದ್ದ ಕವನ ಹಿರಿಯರಿಗೆ ಗೌರವ ಕೊಡುತ್ತಿರಲಿಲ್ಲ. ಚಿನ್ನಾಭರಣ, ದುಬಾರಿ ಬೆಲೆ ವಸ್ತುಗಳನ್ನು ನೀಡುವಂತೆ ಪೀಡಿಸುತ್ತಿದ್ದಳು. ಒಂದು ವೇಳೆ ಕೊಡಿಸದಿದ್ದರೆ ಮಗನನ್ನು ನಿಂದಿಸುತ್ತಿದ್ದಳು. ಇದರ ಜೊತೆಗೆ ತನ್ನ ತಂದೆಗೆ ಹಣ ನೀಡುವಂತೆ ಒತ್ತಡ ಹಾಕುತ್ತಿದ್ದಳು.

ನಮಗೆ ಒಬ್ಬನೇ ಮಗ ಆಗಿದ್ದರಿಂದ ಬೆಂಗಳೂರಿನಲ್ಲಿ ಪ್ರತ್ಯೇಕ ಮನೆ ಮಾಡಿಕೊಡಲಾಗಿತ್ತು. ವಾಸ ಮಾಡಲು ಎಲ್ಲಾ ವ್ಯವಸ್ಥೆ ಮಾಡಿಕೊಳ್ಳಲಾಗಿತ್ತು. ಆದ್ರೂ ಕವನ ತನ್ನ ಹಳೆ ಚಾಳಿಯನ್ನು ಮುಂದುವರಿಸಿದ್ದಳು. ಪ್ರತಿನಿತ್ಯ ಹಿಂಸೆ ಕೊಡುತ್ತಿರುವ ಕಾರಣ ಮಹೇಶ್ವರ್ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ರತ್ನಮ್ಮ ಆರೋಪಿಸಿದ್ದಾರೆ.