ಪರಿಷತ್‍ನಲ್ಲಿ ಗದ್ದಲಕ್ಕೆ ಕಾರಣವಾಯ್ತು ದಿ ಕಾಶ್ಮೀರ್ ಫೈಲ್ಸ್ ಸಿನಿಮಾ.

68
firstsuddi

ಬೆಂಗಳೂರು : ದಿ ಕಾಶ್ಮೀರಿ ಫೈಲ್ಸ್ ಸಿನಿಮಾ ವೀಕ್ಷಣೆ ವಿಚಾರ ಸಂಬಂಧ ಇಂದು ವಿಧಾನ ಪರಿಷತ್‍ನಲ್ಲಿ ಗದ್ದಲದ ವಾತಾವರಣ ನಿರ್ಮಾಣವಾಯಿತು.

ನಿನ್ನೆ ವಿಧಾನಸಭೆಯಲ್ಲಿ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಇಂದು ಚಿತ್ರ ವೀಕ್ಷಿಸಲು ಸಚಿವರಿಗೆ ಮತ್ತು ಶಾಸಕರಿಗೆ ವ್ಯವಸ್ಥೆ ಮಾಡಿದ್ದೇವೆ. ಎಲ್ಲರೂ ಮಂತ್ರಿ ಮಾಲ್ ಥಿಯೇಟರ್ ಗೆ ಸಿನಿಮಾ ವೀಕ್ಷಿಸಲು ಬರಬೇಕೆಂದು ಆಹ್ವಾನ ನೀಡಿದ್ದರು. ಇದರ ಬೆನ್ನಲ್ಲೇ ಇಂದು ಕಲಾಪ ಆರಂಭವಾಗುತ್ತಿದ್ದಂತೆ ಶಾಸಕರನ್ನು ಆಹ್ವಾನಿಸಿ ಪರಿಷತ್‍ನಲ್ಲಿ ಸಭಾಪತಿ ಬಸವರಾಜ ಹೊರಟ್ಟಿ ಪ್ರಕಟಣೆ ನೀಡಿದರು. ಈ ವೇಳೆ ಕಾಶ್ಮೀರ್ ಫೈಲ್ಸ್ ಸಿನಿಮಾ ವೀಕ್ಷಣೆ ವಿಚಾರ ವಾಪಸ್ ಪಡೆಯುವಂತೆ ಕಾಂಗ್ರೆಸ್ ಗದ್ದಲ ನಡೆಸಿತು.

ವಿಧಾನ ಪರಿಷತ್ ವಿಪಕ್ಷ ನಾಯಕ ಬಿ.ಕೆ. ಹರಿಪ್ರಸಾದ್ ಮಾತನಾಡಿ, ಫರ್ಜಾನಾ ಮತ್ತು ವಾಟರ್ ಅಂತ ಎರಡು ಸಿನಿಮಾ ಇವೆ ಅವನ್ನೂ ತೋರಿಸಿ ಎಂದ ಹರಿಪ್ರಸಾದ್, ಸರ್ಕಾರ ಯಾಕೆ ಬಲವಂತವಾಗಿ ಸಿನಿಮಾ ತೋರಿಸುವುದಕ್ಕೆ ಹೊರಟಿದೆ ಎಂದು ಪ್ರಶ್ನಿಸಿದರು. ಮಾತನ್ನು ಮುಂದುವರೆಸಿದ ಹರಿಪ್ರಸಾದ್ ನಾವು ಯಾವ ಸಿನಿಮಾ ನೋಡಬೇಕು ಅಂತ ಸದನದಲ್ಲಿ ಹೇಳೋ ಹಾಗಿಲ್ಲ. ಕೆಲವರು ಸದನದಲ್ಲಿ ಬ್ಲ್ಯೂ ಫಿಲಂ ಸಹ ನೋಡಿದ್ದಾರೆ. ನಾವೂ ಹಾಗಾದ್ರೆ ಬ್ಲ್ಯೂ ಫಿಲಂ ನೋಡಬೇಕಾ? ಸರ್ಕಾರ ಪಿಚ್ಚರ್ ತೋರಿಸೋದಕ್ಕೆ ಇದೆಯಾ? ಪೀಠದಿಂದ ಯಾಕೆ ಇದನ್ನು ಹೇಳಿಸ್ತೀರಾ? ಎಂದು ಕೇಳಿದರು.

ಸಲೀಂ ಅಹಮದ್ ಮಾತನಾಡಿ, ಬಜೆಟ್ ಚರ್ಚೆ ಬಿಟ್ಟು ಸಿನಿಮಾ ಯಾಕೆ ನೋಡಬೇಕು ಎಂದು ಪ್ರಶ್ನೆ ಎತ್ತಿದರು. ಆಗ ಮಧ್ಯಪ್ರವೇಶಿಸಿದ ಸಚಿವ ಎಸ್‌ಟಿ ಸೋಮಶೇಖರ್, ಯಾರಿಗೂ ಕಡ್ಡಾಯ ಇಲ್ಲ, ಇಷ್ಟ ಇದ್ದರೆ ನೋಡಿ ಎಂದರು. ಆಗ ಕಾಂಗ್ರೆಸ್, ಬಿಜೆಪಿ ಸದಸ್ಯರ ನಡುವೆ ಸಿನಿಮಾ ವಿಚಾರಕ್ಕೆ ಗದ್ದಲ ಉಂಟಾಯಿತು. ಬಾಬೂ ಭಜರಂಗಿ ಅಂತ ಸಿನಿಮಾ ತೋರಿಸಿ. ಗುಜರಾತ್ ಫೈಲೂ ತೋರಿಸಲಿ. ಸದನದಲ್ಲಿ ಮಾಡಿದ ಘೋಷಣೆ ವಾಪಸ್ ಪಡೆಯಬೇಕು ಎಂದು ಕಾಂಗ್ರೆಸ್ ಸದಸ್ಯರು ಪಟ್ಟು ಹಿಡಿದು ಘೋಷಣೆ ಕೂಗಿದರು.