ಪವರ್ ಸ್ಟಾರ್ ಗೆ 46ನೇ ಹುಟ್ಟುಹಬ್ಬದ ಸಂಭ್ರಮ … ಅಭಿಮಾನಿಗಳಿಂದ ಅಪ್ಪುಗೆ ಶುಭಾಶಯಗಳ ಸುರಿಮಳೆ…

100
Firstsuddi

ಸ್ಯಾಂಡಲ್‍ವುಡ್ ನಲ್ಲಿ ಎಲ್ಲರ ಜೊತೆ ಉತ್ತಮ ಒಡನಾಟ ಹೊಂದಿರುವ ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಅವರು 46ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಪುನೀತ್ ಅವರು ಇಂದು ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿಲ್ಲವಾದರೂ ಅಭಿಮಾನಿಗಳು ಮಾತ್ರ ನಿನ್ನೆಯಿಂದಲೇ ಪ್ರೀತಿಯ ಅಪ್ಪುವಿಗೆ ಹುಟ್ಟುಹಬ್ಬದ ಶುಭ ಕೋರುತ್ತಿದ್ದಾರೆ.

6 ತಿಂಗಳ ಮಗುವಾಗಿದ್ದಾಗಲೇ ‘ಪ್ರೇಮದ ಕಾಣಿಕೆ’ ಸಿನಿಮಾದ ಮೂಲಕ ಚಿತ್ರರಂಗದಲ್ಲಿ ಕಾಣಿಸಿಕೊಂಡರು. ನಂತರ 3 ವರ್ಷದವರಿರುವಾಗ ‘ವಸಂತ ಗೀತ’ ಚಿತ್ರದಲ್ಲಿ ಅಪ್ಪು ನಟಿಸಿದರು. ಅಲ್ಲಿಂದ ಭೂಮಿಗೆ ಬಂದ ಭಗವಂತ, ಭಾಗ್ಯವಂತ, ಚಲಿಸುವ ಮೋಡಗಳು, ಭಕ್ತ ಪ್ರಹ್ಲಾದ, ಎರಡು ನಕ್ಷತ್ರಗಳು ಸಿನಿಮಾದಲ್ಲಿ ನಟಿಸಿದರು. ಉತ್ತಮ ನಟನೆಗಾಗಿ ‘ಬೆಟ್ಟದ ಹೂವು’ ಚಿತ್ರಕ್ಕೆ ರಾಷ್ಟ್ರಪ್ರಶಸ್ತಿ ಹಾಗೂ ಎರಡು ನಕ್ಷತ್ರಗಳು ಚಿತ್ರಕ್ಕೆ ಕರ್ನಾಟಕ ರಾಜ್ಯ ಫಿಲ್ಮ್ ಫೇರ್ ಪ್ರಶಸ್ತಿಯನ್ನೂ ಪಡೆದಿದ್ದಾರೆ. ಸುಮಾರು 13 ವರ್ಷಗಳ ನಂತರ ‘ಅಪ್ಪು’ ಚಿತ್ರದ ಮೂಲಕ ನಾಯಕನಾಗಿ ನಟಿಸುವ ಮೂಲಕ ಮತ್ತೆ ಚಿತ್ರರಂಗಕ್ಕೆ ಬಂದರು. ಅಭಿ, ಮೌರ್ಯ, ಆಕಾಶ್, ವಂಶಿ, ಜಾಕಿ, ನಿನ್ನಿಂದಲೇ, ಅಂಜನಿಪುತ್ರ ಸೇರಿ ಇದುವರೆಗೂ ಸುಮಾರು 45 ಸಿನಿಮಾಗಳಲ್ಲಿ ಪುನೀತ್ ನಟಿಸಿದ್ದಾರೆ. ಪುನೀತ್ ನಟಿಸಿರುವ ‘ಯುವರತ್ನ’ ಬಿಡುಗಡೆಯಾಗಬೇಕಿದೆ. ಸದ್ಯಕ್ಕೆ ಅವರು ‘ಜೇಮ್ಸ್’ ಸಿನಿಮಾ ಚಿತ್ರೀಕರಣದಲ್ಲಿ ಬ್ಯುಸಿ ಇದ್ದಾರೆ.

ಕಿಚ್ಚ ಸುದೀಪ್ ಹಾಗೂ ದರ್ಶನ್ ಸೇರಿದಂತೆ ಸ್ಯಾಂಡಲ್‍ವುಡ್ ನ ಅನೇಕ ಸೆಲೆಬ್ರಿಟಿಗಳು ಶುಭ ಕೋರಿದ್ದಾರೆ. ಪರಿಸ್ಥಿತಿ ಚೆನ್ನಾಗಿ ಇದ್ದಿದ್ದರೆ ಪುನೀತ್ ಅವರ ಹುಟ್ಟುಹಬ್ಬವನ್ನು ಅದ್ದೂರಿಯಾಗಿ ಆಚರುಸುತ್ತಿದ್ದರು. ಆದರೆ ಕೋವಿಡ್ ಕಾರಣದಿಂದಾಗಿ ಸಂಭ್ರಮಕ್ಕೆ ಬ್ರೇಕ್ ಹಾಕಲಾಗಿದೆ. ಕಳೆದ ವರ್ಷ ಕೊರೊನಾ ಹಿನ್ನಲೆ ಬರ್ತ್ ಡೇ ಕ್ಯಾನ್ಸಲ್ ಮಾಡಲಾಗಿತ್ತು. ಈ ಬಾರಿಯೂ ನಾನು ಮನೆಯಲ್ಲಿ ಇರುವುದಿಲ್ಲ. ಹಾಗಾಗಿ ಯಾರೂ ಕೂಡ ಮನೆ ಬಳಿ ಬರುವುದು ಬೇಡ ಎಂದು ಪುನೀತ್ ಅವರು ಎರಡು ದಿನ ಮುನ್ನವೇ ಅಭಿಮಾನಿಗಳಲ್ಲಿ ವಿನಂತಿಸಿಕೊಂಡಿದ್ದರು. ಇದೇ ತಿಂಗಳ 23 ರಿಂದ ಪ್ರತಿ ಜಿಲ್ಲೆಗಳಿಗೂ ತೆರಳಿ ಅಭಿಮಾನಿಗಳ ಜೊತೆ ಹುಟ್ಟುಹಬ್ಬ ಆಚರಿಸಿಕೊಳ್ಳುವುದಾಗಿ ತಿಳಿಸಿದ್ದಾರೆ.