ಪೂಂಚ್‌ನಲ್ಲಿ ಸೇನಾ ವಾಹನದ ಮೇಲೆ ದಾಳಿ- ಕಾರ್ಯಾಚರಣೆ ಆರಂಭ…

46
firstsuddi

ಪೂಂಚ್: ಜಮ್ಮು ಮತ್ತು ಕಾಶ್ಮೀರದ ಪೂಂಚ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ ಐವರು ಯೋಧರು ಹುತಾತ್ಮರಾಗಿದ್ದು, ಉಗ್ರರಿಗಾಗಿ ಸೇನಾಪಡೆಗಳು ಕಾರ್ಯಾಚರಣೆ ಆರಂಭಿಸಿವೆ ಎಂದು ಅಧಿಕಾರಿಗಳು ಇಂದು ತಿಳಿಸಿದ್ದಾರೆ.

ನಿನ್ನೆ ಜಮ್ಮು ಕಾಶ್ಮೀರದ ಪೂಂಚ್ ಜಿಲ್ಲೆಯ ಭಿಂಬರ್ ಗಲಿ ಪ್ರದೇಶದ ಬಳಿ ಸೇನಾ ವಾಹನವನ್ನು ಗುರಿಯಾಗಿಸಿ ಉಗ್ರರು ದಾಳಿ ನಡೆಸಿದ್ದರು. ಈ ವೇಳೆ ಐವರು ಯೋಧರು ಹುತಾತ್ಮರಾಗಿದ್ದು, ಓರ್ವ ಯೋಧ ಗಾಯಗೊಂಡಿದ್ದಾರೆ. ಘಟನೆಗೆ ಸಂಬಂಧಿಸಿ ಎನ್‍ಐಎ ತಂಡ ಇಂದು ಮಧ್ಯಾಹ್ನ 12:30ರ ಸುಮಾರಿಗೆ ದೆಹಲಿಯಿಂದ ವಿಧಿವಿಜ್ಞಾನ ತಜ್ಞರೊಂದಿಗೆ ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಲಿದೆ.

ಸೇನಾ ಪ್ರಧಾನ ಕಚೇರಿಯ ಉತ್ತರ ಕಮಾಂಡ್ ಅಧಿಕೃತವಾಗಿ ಮಾತನಾಡಿ, ಅನಾಮಿಕ ಉಗ್ರರು ಸೇನಾ ವಾಹನದ ಮೇಲೆ ಗುಂಡು ಹಾರಿಸಿದ್ದಾರೆ. ಭಾರೀ ಮಳೆ ಹಾಗೂ ಕಡಿಮೆ ಗೋಚರತೆಯ ಲಾಭವನ್ನು ಉಗ್ರರು ಪಡೆದುಕೊಂಡಿದ್ದಾರೆ. ಅಷ್ಟೇ ಅಲ್ಲದೇ ಘಟನೆಗೆ ಉಗ್ರರು ಗ್ರೆನೇಡ್‍ಗಳನ್ನು ಬಳಸಿದ್ದರಿಂದ ವಾಹನಕ್ಕೆ ಬೆಂಕಿ ಹತ್ತಿಕೊಂಡಿದೆ ಎಂದು ತಿಳಿಸಿದ್ದಾರೆ.

ದಾಳಿ ನಡೆದ ಸ್ಥಳದ ಸುತ್ತಲೂ ಭದ್ರತಾ ಪಡೆಗಳು ಸುತ್ತುವರೆದಿದ್ದು, ಶೋಧ ಕಾರ್ಯಾಚರಣೆಯನ್ನು ನಡೆಸುತ್ತಿದೆ. ಉಗ್ರರ ಪತ್ತೆಗೆ ಡ್ರೋಣ್’ಗಳು, ಸ್ನಿಫ್ಪರ್ ಡಾಗ್ ಗಳನ್ನು ಬಳಕೆ ಮಾಡಲಾಗುತ್ತಿದೆ ಎಂದು ಮಾಹಿತಿ ನೀಡಿದ್ದಾರೆ.

ದಾಳಿಯಲ್ಲಿ ಮೃತಪಟ್ಟ ಯೋಧರನ್ನು ಹವಿಲ್ದಾರ್ ಮನ್ದೀಪ್ ಸಿಂಗ್, ದೇಬಾಶಿಶ್ ಬಸ್ವಾಲ್, ಕುಲ್ವಂತ್ ಸಿಂಗ್, ಹಕ್ರಿಶನ್ ಸಿಂಗ್ ಮತ್ತು ಸೇವಕ್ ಸಿಂಗ್ ಎಂದು ಗುರುತಿಸಲಾಗಿದೆ. ದಾಳಿಯಲ್ಲಿ ಗಂಭೀರವಾಗಿ ಗಾಯಗೊಂಡಿರುವ ಮತ್ತೋರ್ವ ಯೋಧನನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ಮೃತ ಯೋಧರೆಲ್ಲರೂ ಈ ಪ್ರದೇಶದಲ್ಲಿ ಉಗ್ರ ನಿಗ್ರಹ ಕಾರ್ಯಾಚರಣೆಗೆ ನಿಯೋಜಿಸಲಾಗಿದ್ದ ರಾಷ್ಟ್ರೀಯ ರೈಫಲ್ಸ್ ಘಟಕದ ಸಿಬ್ಬಂದಿಯಾಗಿದ್ದಾರೆ.

ಜೈಶ್ ಬೆಂಬಲಿತ ಉಗ್ರರ ಗುಂಪು, ಪೀಪಲ್ಸ್ ಆ್ಯಟಿ ಫ್ಯಾಸಿಸ್ಟ್ ಫ್ರಂಟ್ (ಪಿಎಎಫ್ಎಫ್) ದಾಳಿಯ ಹೊಣೆಯನ್ನು ಹೊತ್ತುಕೊಂಡಿದೆ ಎಂದು ಮೂಲಗಳು ತಿಳಿಸಿವೆ. ಘಟನೆಯಲ್ಲಿ ನಾಲ್ವರು ಉಗ್ರರು ಭಾಗಿಯಾಗಿದ್ದಾರೆ ಎಂದು ಅಧಿಕಾರಿಗಳು ಶಂಕಿಸಿದ್ದಾರೆ.

ಗೋವಾದಲ್ಲಿ ನಡೆಯಲಿರುವ ಶಾಂಘೈ ಸಹಕಾರ ಸಂಘಟನೆಯ ವಿದೇಶಾಂಗ ಸಚಿವರ ಸಭೆಗಾಗಿ ಪಾಕಿಸ್ತಾನದ ವಿದೇಶಾಂಗ ಸಚಿವ ಬಿಲಾವಲ್ ಭುಟ್ಟೊ ಜರ್ದಾರಿ ಮುಂದಿನ ತಿಂಗಳು ಭಾರತಕ್ಕೆ ಭೇಟಿ ನೀಡಲಿದ್ದಾರೆ ಎಂದು ಪಾಕಿಸ್ತಾನ ಘೋಷಿಸಿದ ದಿನವೇ ಉಗ್ರರ ದಾಳಿ ನಡೆದಿದೆ.

ಪ್ರಮುಖವಾಗಿ, ಮೇ ತಿಂಗಳಲ್ಲಿ ಶ್ರೀನಗರದಲ್ಲಿ ಜಿ20 ಪ್ರವಾಸೋದ್ಯಮ ವಕಿರ್ಂಗ್ ಗ್ರೂಪ್ ಸಭೆಯನ್ನು ಸಹ ನಿಗದಿಯಾಗಿದೆ. ಕಳೆದ ವಾರ ಕೇಂದ್ರಾಡಳಿತ ಪ್ರದೇಶದ ಭದ್ರತಾ ಪರಿಸ್ಥಿತಿಯನ್ನು ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಪರಿಶೀಲಿಸಿದ್ದರು.