ಹಾವೇರಿ : ಸಿದ್ದರಾಮಯ್ಯ ಅವರಿಗೆ ಪ್ರಧಾನಿ ಮೋದಿ ಅವರನ್ನು ಟೀಕಿಸದಿದ್ದರೆ ತಿಂದಿರುವ ಅನ್ನ ಕರಗುವುದಿಲ್ಲ. ಮೋದಿ ಅವರನ್ನು ಟೀಕೆ ಮಾಡುವ ನಾನೇ ದೊಡ್ಡ ನಾಯಕ ಎನ್ನುವ ಭ್ರಮೆಯಲ್ಲಿದ್ದಾರೆ ಎಂದು ಗ್ರಾಮೀಣಾಭಿವೃದ್ದಿ ಹಾಗೂ ಪಂಚಾಯತ್ ರಾಜ್ ಸಚಿವ ಕೆ.ಎಸ್. ಈಶ್ವರಪ್ಪ ಅವರು ಹೇಳಿದ್ದಾರೆ. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಲೋಕಸಭಾ ಚುನಾವಣೆಯ ವೇಳೆ ಸಿದ್ದರಾಮಯ್ಯ ಅವರು ಬಿಜೆಪಿ ಪಕ್ಷಕ್ಕೆ ಒಂದೇ ಒಂದು ಸ್ಥಾನ ಸಿಗುವುದಿಲ್ಲ ಎಂದು ಹೇಳಿದ್ದರು. ಆದರೆ 25 ಸ್ಥಾನಗಳನ್ನು ಗೆದ್ದೆವು. ಉಪಚುನಾವಣೆಯ ವೇಳೆಯೂ ಬಿಜೆಪಿಗೆ ಹೆಚ್ಚಿನ ಸ್ಥಾನ ಬಂದವು. ಸಿದ್ದರಾಮಯ್ಯ ಅವರಿಗೆ ಚಾಮುಂಡೇಶ್ವರಿಯಲ್ಲಿ ಸೋತರೂ ಬುದ್ದಿ ಬರಲಿಲ್ಲ. ಉಪಚುನಾವಣೆಯಲ್ಲಿ ಕಾಂಗ್ರೆಸ್ ಅತಿ ಕಡಿಮೆ ಸ್ಥಾನವನ್ನು ಗೆದ್ದರೂ ಬುದ್ದಿ ಬರಲಿಲ್ಲ. ಇನ್ನು ಎಷ್ಟು ಚುನಾವಣೆಯಲ್ಲಿ ಸೋತ ಮೇಲೆ ಬುದ್ದಿ ಬರುತ್ತದೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಅವರು ಹೇಳಬೇಕು. ಅಲ್ಲದೇ ಪ್ರಧಾನಿ ಮೋದಿ ಅವರನ್ನು ಟೀಕಿಸದಿದ್ದರೆ ಸಿದ್ದರಾಮಯ್ಯ ಅವರಿಗೆ ತಿಂದಿರುವ ಅನ್ನ ಕರಗುವುದಿಲ್ಲ. ಮೋದಿ ಟೀಕೆ ಮಾಡುವ ನಾನೇ ದೊಡ್ಡ ನಾಯಕ ಎನ್ನುವ ಭ್ರಮೆಯಲ್ಲಿದ್ದಾರೆ ಎಂದು ಕಿಡಿಕಾರಿದರು.
ಇದೇ ವೇಳೆ ಪೌರತ್ವ ಕಾಯ್ದೆ ವಿರೋಧಿಸಿ ನಡೆಯುತ್ತಿರುವ ಪ್ರತಿಭಟನೆ ಬಗ್ಗೆ ಪ್ರತಿಕ್ರಯಿಸಿದ ಅವರು, ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಮುಸ್ಲಿಂ ನಾಯಕರೇ ಸ್ವಾಗತ ಮಾಡಿದ್ದಾರೆ. ಆದರೆ ಕಾಂಗ್ರೆಸ್ ಹಾಗೂ ಜೆಡಿಎಸ್ ವಿರೋಧ ವ್ಯಕ್ತಪಡಿಸುತ್ತಿದೆ. ಜನರು ನಮ್ಮ ಕಡೆ ಇರುವುದನ್ನು ಕಾಂಗ್ರೆಸ್ ಹಾಗೂ ಜೆಡಿಎಸ್ ನವರಿಗೆ ತಡೆಯುವುದಕ್ಕೆ ಆಗುತ್ತಿಲ್ಲ. ಹೀಗಾಗಿ ಪೌರತ್ವ ತಿದ್ದುಪಡಿ ಬಿಲ್ ಪಾಸಾಗಿದ್ದಕ್ಕೆ ಇಡೀ ದೇಶದಲ್ಲಿ ಹಿಂದೂ-ಮುಸ್ಲಿಂ ಕೋಮು ಗಲಭೆ ಸೃಷ್ಠಿಸುವ ಕೆಲಸ ಮಾಡುತ್ತಿದ್ದಾರೆ. ಕಾಂಗ್ರೆಸ್ ನವರ ಕುತಂತ್ರ ರಾಜಕಾರಣ ಇಲ್ಲಿ ನಡೆಯುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.










