ಪ್ರಧಾನಿ ಮೋದಿ ಅವರೊಂದಿಗೆ ಸಂವಾದಕ್ಕೆ ರಾಜ್ಯದ ವಿದ್ಯಾರ್ಥಿನಿ ಆಯ್ಕೆ…

283
firstsuddi

ಬಾಗಲಕೋಟೆ : ಜ.20ರಂದು ದೆಹಲಿಯಲ್ಲಿ ನಡೆಯಲಿರುವ “ಪರೀಕ್ಷಾ ಪೆ ಚರ್ಚಾ” ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಸಂವಾದ ನಡೆಸಲು ರಾಜ್ಯದ ವಿದ್ಯಾರ್ಥಿನಿ ಆಯ್ಕೆಯಾಗಿದ್ದಾರೆ. ಜಿಲ್ಲೆಯ ಹುನಗುಂದ ತಾಲ್ಲೂಕಿನ ತಾರಿವಾಳ ಗ್ರಾಮದ ಪೂರ್ಣಿಮ ರೇವಣಸಿದ್ದಪ್ಪ ನಾಶಿ ಎಂಬ ವಿದ್ಯಾರ್ಥಿನಿ ಪ್ರಧಾನಿ ನರೇಂದ್ರ ಮೋದಿ ಅವರು ನಡೆಸುವ ಸಂವಾದಕ್ಕೆ ಆಯ್ಕೆಯಾಗಿದ್ದು, ವಿದ್ಯಾರ್ಥಿನಿಯ ಕುಟುಂಬಸ್ಥರಲ್ಲಿ ಸಂಭ್ರಮ ಮನೆಮಾಡಿದೆ. ಬಾಲಕಿ ಗ್ರಾಮದ ಜಂಬಲದಿನ್ನಿ ಸರ್ಕಾರಿ ಪ್ರೌಢಶಾಲೆಯಲ್ಲಿ 9ನೇ ತರಗತಿ ವ್ಯಾಸಂಗ ಮಾಡುತ್ತಿದ್ದು, ಆನ್‍ಲೈನ್ ಮೂಲಕ ಪ್ರಬಂಧ ಬರೆದು ಪ್ರಧಾನಿ ಮೋದಿ ಅವರೊಂದಿಗಿನ ಸಂವಾದಕ್ಕೆ ಆಯ್ಕೆ ಆಗಿದ್ದಾರೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ವಿದ್ಯಾರ್ಥಿನಿ ಪೂರ್ಣಿಮ, ಮೋದಿ ಅವರೊಂದಿಗೆ ಸಂವಾದ ನಡೆಸಲು ನನಗೆ ಅವಕಾಶ ಸಿಕ್ಕಿರುವುದು ಬಹಳ ಸಂತೋಷ ವಾಗಿದೆ. ಮೋದಿ ಅವರನ್ನು ನೋಡುವುದೇ ನಮಗೆಲ್ಲ ಖುಷಿ. ಆದರೆ ಅವರೊಂದಿಗೆ ಸಂವಾದದಲ್ಲಿ ಭಾಗವಹಿಸುವ ಅವಕಾಶ ದೊರಕಿರುವುದು ಜೀವನದಲ್ಲಿ ಮರೆಯಲಾಗದು. ಆ ಕ್ಷಣಕ್ಕಾಗಿ ಕಾಯುತ್ತಿದ್ದೇನೆ ಎಂದು ಹೇಳಿದ್ದಾರೆ.