ಬಿಜೆಪಿ ಬಿಡುವುದಿಲ್ಲ – ಸಚಿವ ವಿ.ಸೋಮಣ್ಣ ಸ್ಪಷ್ಟನೆ…

50
firstsuddi

ಬೆಂಗಳೂರು : ಬಿಜೆಪಿ ಬಿಡುವುದಿಲ್ಲ. ಬಿಜೆಪಿಯಲ್ಲೇ ಇರುತ್ತೇನೆ ಎಂದು ಸಚಿವ ವಿ. ಸೋಮಣ್ಣ ಅವರು ಸ್ಪಷ್ಟಪಡಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನನಗೆ ಏನಾದರೂ ಸಮಸ್ಯೆ ಆಗಿದ್ದರೇ ರಾಜೀನಾಮೆ ಕೊಡುತ್ತಿದ್ದೆ. ಆದರೆ ಆ ರೀತಿಯ ಸಮಸ್ಯೆ ನನಗೆ ಏನೂ ಆಗಿಲ್ಲ. ಮುಂದಿನ ಚುನಾವಣೆಯಲ್ಲಿ ಟಿಕೆಟ್ ಕೊಟ್ಟರೇ ಸ್ಪರ್ಧಿಸುತ್ತೇನೆ. ಇಲ್ಲದಿದ್ದರೇ ಪಕ್ಷದ ಕೆಲಸ ಮಾಡಿಕೊಂಡು ಹೋಗುತ್ತೇನೆ ಎಂದು ಹೇಳಿದರು.

ಕಾಂಗ್ರೆಸ್ ಗೆ ಹೋಗುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ನಾನು ಹೊಟ್ಟೆಪಾಡಿಗಾಗಿ ಬೆಂಗಳೂರಿಗೆ ಬಂದಿದ್ದೇನೆ. 56 ವರ್ಷದಿಂದ ಇಲ್ಲೇ ಇದ್ದೇನೆ. ಕರ್ತವ್ಯವೇ ದೇವರು. ಸ್ವಾಭಿಮಾನಕ್ಕೆ ಧಕ್ಕೆ ಬಂದರೆ ನಾನು ಸುಮ್ಮನಿರಲ್ಲ. ಸುಳ್ಳು ಹೇಳಿ ನಾನು ಜೀವನ ಮಾಡಿಲ್ಲ. ಶಿವಕುಮಾರ ಸ್ವಾಮೀಜಿ, ಬಾಲಗಂಗಾಧರನಾಥ ಸ್ವಾಮೀಜಿ ನನಗೆ ಪ್ರೇರಣೆ. ಯಾರ ಮುಲಾಜಿನಲ್ಲೂ ಬದುಕಿಲ್ಲ. ಹಿಂದಿರುಗಿ ನೋಡಿದವನಲ್ಲ ಎಂದು ಕಣ್ಣೀರು ಹಾಕಿದರು.

ನಾನು ಪಕ್ಷಕ್ಕೆ ನಿಷ್ಠನಾಗಿದ್ದೇನೆ. ಯಾವ ಪಕ್ಷದಲ್ಲಿದ್ದರೂ ಆ ಪಕ್ಷವೇ ನನಗೆ ತಾಯಿ. ನನಗೆ ಡಬಲ್ ಸ್ಟಾಂಡರ್ಡ್ ಇಲ್ಲ. ಅಲ್ಲೊಂದು ಇಲ್ಲೊಂದು ಮಾತಾಡುವ ಬುದ್ಧಿ ಇಲ್ಲ ಎಂದ ಅವರು, ಮಠಮಾನ್ಯಗಳಿಗೆ ಒಬ್ಬನೇ ಸೋಮಣ್ಣ ಕೊಂಡಿಯಾಗಿದ್ದವನು. ಕಳೆದ ಕೆಲ ದಿನಗಳ ಬೆಳವಣಿಗೆ ನೋವು ತಂದಿದೆ. ಎಂದಾದರೂ ಬಿಜೆಪಿ ಬಿಡ್ತೀನಿ ಅಂತ ಮಾತಾಡಿಲ್ಲ ಎಂದು ಸ್ಪಷ್ಟಪಡಿಸಿದರು.

ವಿ. ಸೋಮಣ್ಣ ಕಾಂಗ್ರೆಸ್ ಸೇರುತ್ತಾರೆ ಎಂಬ ವದಂತಿ ಬೆನ್ನಲ್ಲೆ ಡಿ.ಕೆ ಶಿವಕುಮಾರ್ ಮತ್ತು ಸೋಮಣ್ಣ ಒಟ್ಟಿಗೆ ಕುಳಿತು ಮಾತನಾಡುತ್ತಿರುವ ದೃಶ್ಯದ ಫೋಟೋ ವೈರಲ್ ಆಗಿದ್ದು ಈ ಕುರಿತು ಸಚಿವ ವಿ.ಸೋಮಣ್ಣ ಸ್ಪಷ್ಟನೆ ನೀಡಿದ್ದಾರೆ. ಕೆಪಿಸಿಸಿ ಡಿಕೆ ಶಿವಕುಮಾರ್ ಮತ್ತು ನಾನು ಇರುವ ಆ ಫೋಟೋ ಯಾವುದೋ ಕಾಲದ್ದು. ಆದರೆ ಈಗ ಫೋಟೋ ವೈರಲ್ ಆಗಿದೆ. ಈಗ ವೈರಲ್ ಮಾಡಿದ್ರೆ ಏನು ಮಾಡೋಕೆ ಆಗಲ್ಲ ಎಂದು ಹೇಳಿದ್ದಾರೆ.