ಚಂಡೀಗಢ : ರಸ್ತೆ ಬದಿಯಲ್ಲಿ ಬೀದಿ ನಾಯಿಗೆ ಆಹಾರ ನೀಡುತ್ತಿದ್ದ ಯುವತಿಯ ಮೇಲೆ ಕಾರೊಂದು ಹರಿದ ಘಟನೆ ಚಂಡೀಗಢದಲ್ಲಿ ನಡೆದಿದೆ. ಈ ಭಯಾನಕ ದೃಶ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿದೆ.
ತೇಜಸ್ವಿತಾ (25) ಗಂಭೀರ ಗಾಯಗೊಂಡ ಯುವತಿ. ತೇಜಸ್ವಿತಾ ರಸ್ತೆ ಬದಿಯಲ್ಲಿ ಬೀದಿ ನಾಯಿಗೆ ಆಹಾರ ನೀಡುತ್ತಿದ್ದಳು. ಈ ವೇಳೆ ಅತಿವೇಗವಾಗಿ ಬಂದ ಕಾರೊಂದು ತೇಜಸ್ವಿತಾ ಮೇಲೆ ಹರಿದಿದೆ. ತೇಜಸ್ವಿತಾ ರಕ್ತದ ಮಡುವಿನಲ್ಲಿ ಬಿದ್ದಿರುವುದನ್ನು ಕಂಡು ತಾಯಿ ಗಾಬರಿಗೊಂಡಿದ್ದಾರೆ. ನಂತರ ಮನೆಗೆ ಮತ್ತು ಪೊಲೀಸರಿಗೆ ಕರೆ ಮಾಡಿದ್ದಾರೆ. ಕೂಡಲೇ ಆಕೆಯನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅಲ್ಲಿ ಹೆಚ್ಚಿನ ಚಿಕಿತ್ಸೆ ಪಡೆಯುತ್ತಿದ್ದಾಳೆ. ಘಟನೆ ವೇಳೆ ತೇಜಸ್ವಿತಾ ತಲೆಗೆ ಗಂಭೀರ ಗಾಯವಾಗಿದೆ.
ಕುಟುಂಬದವರ ಪ್ರಕಾರ, ತೇಜಸ್ವಿತಾ ಆರ್ಕಿಟೆಕ್ಟ್ ಪದವೀಧರರಾಗಿದ್ದು, ಯುಪಿಎಸ್ಸಿಗೆ ತಯಾರಿ ನಡೆಸುತ್ತಿದ್ದಾಳೆ. ಶನಿವಾರ ರಾತ್ರಿ ತೇಜಸ್ವಿತಾ ಮತ್ತು ಆಕೆಯ ತಾಯಿ ಮಂಜಿದರ್ ಕೌರ್ ಫುಟ್ಪಾತ್ ನಲ್ಲಿ ಬೀದಿ ನಾಯಿಗಳಿಗೆ ಆಹಾರ ನೀಡುತ್ತಿದ್ದಾಗ ಈ ಘಟನೆ ನಡೆದಿದೆ ಎಂದು ಹೇಳಿದ್ದಾರೆ.
ಘಟನೆಗೆ ಸಂಬಂಧಿಸಿ ತೇಜಸ್ವಿತಾ ತಂದೆ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ವಾಹನ ಹಾಗೂ ಚಾಲಕನಿಗಾಗಿ ಶೋಧ ನಡೆಸುತ್ತಿದ್ದಾರೆ.










