ಬೆಳ್ಳಂಬೆಳ್ಳಗೆ ರೌಡಿಶೀಟರ್ ಮನೆಗಳ ಮೇಲೆ ಪೊಲೀಸರ ದಾಳಿ…

46
firstsuddi

ಬೆಂಗಳೂರು: ಅಪರಾಧ ಕೃತ್ಯಗಳು ಹಾಗೂ ಗಾಂಜಾ ಮಾರಾಟ ಪ್ರಕರಣಗಳು ಹೆಚ್ಚಾದ ಹಿನ್ನಲೆಯಲ್ಲಿ ಇಂದು ಬೆಳಗ್ಗೆ ನಗರದ ವಿವಿಧೆಡೆ ರೌಡಿಶೀಟರ್ ಮನೆಗಳ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ.

ನಗರದ ಪೂರ್ವ ವಿಭಾಗದ ಪೋಲಿಸರು ಹಲಸೂರು, ಪುಲಕೇಶಿನಗರ, ಡಿಜೆ ಹಳ್ಳಿ, ಕೆಜಿ ಹಳ್ಳಿ ಠಾಣಾ ವ್ಯಾಪ್ತಿಯ ರೌಡಿಶೀಟರ್ ಮನೆಗಳ ಮೇಲೆ ಡಿಸಿಪಿ ಭೀಮಾಶಂಕರ ಗುಳೇದ್ ನೇತೃತ್ವದಲ್ಲಿ ದಾಳಿ ಮಾಡಿದ್ದು, ಪರಿಶೀಲನೆ ನಡೆಸಿದ್ದಾರೆ.

ಇನ್ನು ಆಗ್ನೇಯ ವಿಭಾಗದ ರೌಡಿಶೀಟರ್ ಮನೆಗಳ ಮೇಲೂ ದಾಳಿ ನಡೆಸಲಾಗಿದೆ. ಚುನಾವಣಾ ಸಂದರ್ಭದಲ್ಲಿ ಜೈಲು ಸೇರಿ ಬಿಡುಗಡೆಗೊಂಡಿರುವ ರೌಡಿಶೀಟರ್‌ಗಳಿಗೆ ಮತ್ತೆ ಎಚ್ಚರಿಕೆ ಕೊಡುವ ಸಲುವಾಗಿ ದಾಳಿ ಮಾಡಿ ಪರಿಶೀಲನೆ ನಡೆಸಿದ್ದು, ರೌಡಿ ಆಕ್ಟಿವಿಟಿಗಳಲ್ಲಿ ಭಾಗಿಯಾಗದಂತೆಯೂ ಎಚ್ಚರಿಕೆ ಕೊಡಲಾಗಿದೆ. ಡಿಸಿಪಿ ಸಿಕೆ ಬಾಬ ನೇತೃತ್ವದಲ್ಲಿ ದಾಳಿ ಮಾಡಿ ಪರಿಶೀಲನೆ ನಡೆಸಿದ್ದು, ಕೋರಮಂಗಲ, ಮಡಿವಾಳ, ಆಡುಗೋಡಿ, ಮೈಕೋ ಲೇ ಔಟ್ ಸೇರಿ ಎಲ್ಲಾ ಠಾಣಾ ವ್ಯಾಪ್ತಿಯಲ್ಲಿ ದಾಳಿ ಮಾಡಲಾಗಿದೆ. 

ಇನ್ನು ಪೊಲೀಸ್ ಆಯುಕ್ತ ಬಿ. ದಯಾನಂದ ಸೂಚನೆ ಮೇರೆಗೆ ನಗರದ ಎಂಟು ವಿಭಾಗದ ಪೊಲೀಸರಿಂದ ಸುಮಾರು ಒಂದು ಸಾವಿರಕ್ಕೂ ಹೆಚ್ಚು ರೌಡಿಗಳ ನಿವಾಸದ ಮೇಲೆ ದಾಳಿ ನಡೆಸಲಾಗಿದ್ದು, ಈ ವೇಳೆ ಹಲವಾರು ರೌಡಿಗಳ ನಿವಾಸದಲ್ಲಿ ಮಾರಕಾಸ್ತ್ರಗಳು ಮತ್ತು ಗಾಂಜಾ ಪತ್ತೆಯಾಗಿದೆ. ಎಂಟು ವಿಭಾಗದ ಪೊಲೀಸರು ದಾಳಿಯಲ್ಲಿ ಭಾಗಿಯಾಗಿದ್ದರು.