ಚಿಕ್ಕೋಡಿ : ನಿಯಂತ್ರಣ ತಪ್ಪಿ ಬೈಕ್ ನಿಂದ ಬಿದ್ದು ನಾಲ್ವರು ಯುವಕರು ಸಾವನ್ನಪ್ಪಿರುವ ಘಟನೆ ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಸಂಕೇಶ್ವರ ಪಟ್ಟಣದ ಹೊರವಲಯದಲ್ಲಿ ನಡೆದಿದೆ.
ಸಂಕೇಶ್ವರ ಪಟ್ಟಣದ ನಿವಾಸಿಗಳಾದ ಬಸವರಾಜ ಮಾಳಿ(29), ಪ್ರವೀಣ್ ಸನದಿ(26), ಮೆಹಬೂಬ ಶೇಗಡಿ(21), ಮಲಿಕ್ ಜಮಾದಾರ್(21) ಮೃತ ದುರ್ದೈವಿಗಳು. ನಿನ್ನೆ ತಡರಾತ್ರಿ ಒಂದೇ ಬೈಕಿನಲ್ಲಿ ನಾಲ್ವರು ಯುವಕರು ಸಂಕೇಶ್ವರ ಪಟ್ಟಣಕ್ಕೆ ಆಗಮಿಸುತ್ತಿದ್ದ ವೇಳೆ ಸಂಕೇಶ್ವರ ಪಟ್ಟಣದ ಹೊರವಲಯದಲ್ಲಿ ಬೈಕ್ ನಿಯಂತ್ರಣ ತಪ್ಪಿ ರಸ್ತೆ ಪಕ್ಕದ ಗುಂಡಿಗೆ ಬಿದ್ದಿದ್ದಾರೆ.
ಈ ವೇಳೆ ಮೂವರು ಯುವಕರು ಸ್ಥಳದಲ್ಲಿಯೇ ಸಾವನ್ನಪ್ಪಿದ್ದು, ಗಂಭೀರವಾಗಿ ಗಾಯಗೊಂಡ ಯುವಕನ್ನು ಬೆಳಗಾವಿ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದ್ರೆ ಚಿಕಿತ್ಸೆ ಫಲಿಸದೆ ಆತನೂ ಸಾವನ್ನಪ್ಪಿದ್ದಾನೆ ಎಂದು ತಿಳಿದುಬಂದಿದೆ. ಸ್ಥಳಕ್ಕೆ ಸಂಕೇಶ್ವರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸಂಕೇಶ್ವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.










