ಬ್ಯಾಂಕ್‍ನಲ್ಲಿ ಕೋಟ್ಯಂತರ ರೂ. ಕಳ್ಳತನ – ಮೂವರು ಆರೋಪಿಗಳು ಅರೆಸ್ಟ್…

89
firstsuddi

ಬೆಳಗಾವಿ : ಬ್ಯಾಂಕ್‍ನಲ್ಲಿ ಕೋಟ್ಯಂತರ ರೂ. ಕಳ್ಳತನ ಮಾಡಿದ್ದ ಮೂವರು ಆರೋಪಿಗಳನ್ನು ಮುರಗೋಡ ಪೊಲೀಸರು ಬಂಧಿಸಿದ್ದು, ಬಂಧಿತ ಆರೋಪಿಗಳಿಂದ 4.37 ಕೋಟಿ ನಗದು, 1.63 ಕೋಟಿ ಮೌಲ್ಯದ ಚಿನ್ನಾಭರಣವನ್ನು ವಶ ಪಡಿಸಿಕೊಂಡಿದ್ದಾರೆ.

ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ತೋರನಗಟ್ಟಿ ಗ್ರಾಮದ ಬಸವರಾಜ ಹುಣಶಿಕಟ್ಟಿ (30), ಸವದತ್ತಿ ತಾಲೂಕಿನ ಯರಗಟ್ಟಿ ಗ್ರಾಮದ ಸಂತೋಷ ಕಂಬಾರ (31) ಹಾಗೂ ಜೀವಾಪೂರ ಗ್ರಾಮದ ಗಿರೀಶ್ ಬೆಳವಲ (26) ಬಂಧಿತ ಆರೋಪಿಗಳು.

ಮಾ.6ರಂದು ಮುರಗೋಡ ಡಿಸಿಸಿ ಬ್ಯಾಂಕ್ ನಲ್ಲಿ ಕಳ್ಳತನ ಆಗಿತ್ತು. ಈ ಕುರಿತು ಮುರಗೋಡ ಡಿಸಿಸಿ ಬ್ಯಾಂಕ್ ಮ್ಯಾನೇಜರ್ ಕೃಷ್ಣಪ್ಪ ಯಲಿಗಾರ ಮುರಗೋಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಒಂದೇ ವಾರದಲ್ಲಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿ ಆಗಿದ್ದಾರೆ. ಅಂದಹಾಗೆ ಡಿಸಿಸಿ ಬ್ಯಾಂಕ್ ನಲ್ಲಿ ಕ್ಲರ್ಕ್ ಕಮ್ ಕ್ಯಾಶಿಯರ್ ಆಗಿ ಕೆಲಸ ಮಾಡುತ್ತಿದ್ದ ಬಸವರಾಜ ಹುಣಸಿಕಟ್ಟಿ ಎಂಬಾತನೇ ನಕಲಿ ಕೀ ಬಳಸಿ ಇಬ್ಬರು ಗೆಳೆಯರೊಂದಿಗೆ ಸೇರಿಕೊಂಡು 4.37ಕೋಟಿ ಹಣ, 1.63ಕೋಟಿ ಮೌಲ್ಯದ ಚಿನ್ನಾಭರಣ ಕದ್ದು ಪರಾರಿ ಆಗಿದ್ದರು.

ನಂತರ ಕದ್ದ ಹಣ ಹಾಗೂ ಚಿನ್ನಾಭರಣವನ್ನು ಕಬ್ಬಿನ ಗದ್ದೆಯಲ್ಲಿ ಹೂತಿಟ್ಟಿದ್ದ. ಬಳಿಕ ಯಾರಿಗೂ ಅನುಮಾನ ಬಾರದಂತೆ ನೀರು ಹಾಯಿಸಿದ್ದ. ಇತ್ತ ಪ್ರಕರಣ ಬೆಳಕಿಗೆ ಬಂದ ನಂತರ ಬ್ಯಾಂಕ್ ಸಿಬ್ಬಂದಿಗೆ ಪೊಲೀಸರು ತೀವ್ರ ವಿಚಾರಣೆ ನಡೆಸಿದ್ದಾರೆ. ಈ ವೇಳೆ ಆತ ತನ್ನ ಗೆಳೆಯರೊಂದಿಗೆ ಸೇರಿಕೊಂಡು ಕಳ್ಳತನ ಮಾಡಿರುವುದಾಗಿ ಒಪ್ಪಿಕೊಂಡಿದ್ದು, ಹಣ ಮತ್ತು ಚಿನ್ನಾಭರಣ ಹೂತಿಟ್ಟಿದ್ದ ಸ್ಥಳದ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದಾನೆ. ಸದ್ಯ ಮಾಹಿತಿ ಮೇರೆಗೆ ಪೊಲೀಸರು ಸ್ಥಳಕ್ಕೆ ತೆರಳಿ ಹಣ, ಚಿನ್ನಾಭರಣವನ್ನು ವಶಕ್ಕೆ ಪಡೆದಿದ್ದಾರೆ.