ಚಿಕ್ಕಬಳ್ಳಾಪುರ : ಹೆತ್ತ ಮಗಳನ್ನೇ ತಂದೆ, ತಾಯಿ ಹಾಗೂ ದೊಡ್ಡಪ್ಪ ಕೊಲೆ ಮಾಡಿರುವ ಘಟನೆ ಜಿಲ್ಲೆಯಲ್ಲಿ ನಡೆದಿದೆ. ಪರ್ವಿನಾ ಬಾನು ಹೆತ್ತವರಿಂದ ಕೊಲೆಯಾದ ದುರ್ದೈವಿ. ಆಕೆಯ ತಾಯಿ ಗುಲ್ಜಾರ್, ತಂದೆ ಫಯಾಜ್ ಹಾಗೂ ದೊಡ್ಡಪ್ಪ ಪ್ಯಾರೇಜಾನ್ ಕೊಲೆ ಮಾಡಿದವರು. ಈ ಮೂವರು ಆರೋಪಿಗಳನ್ನು ಗೌರಿಬಿದನೂರು ಗ್ರಾಮಾಂತರ ಪೊಲೀಸರು ಬಂಧಿಸಿದ್ದಾರೆ.
ಪರ್ವಿನಾ ಬಾನುವಿಗೆ 10 ವರ್ಷಗಳ ಹಿಂದೆ ತಮ್ಮದೇ ಸಮುದಾಯದ ಯುವಕನ ಜೊತೆ ಮದುವೆ ಮಾಡಿದ್ದರು. ಆದರೆ ಮದುವೆ ಮೊದಲ ದಿನವೇ ಗಂಡನನ್ನು ಬಿಟ್ಟು ಬಂದ ಪರ್ವಿನಾ ಬಾನು ಅನ್ಯ ಧರ್ಮದ ಪ್ರಿಯಕರ ಮಣಿವಾಲ ಗ್ರಾಮದ ಶಿವಪ್ಪ ಎಂಬಾತನ ಜೊತೆ ಸಂಸಾರ ಸಾಗಿಸುತ್ತಿದ್ದಳು. ಆದರೆ ಅನಾರೋಗ್ಯದ ಕಾರಣ ಶಿವಪ್ಪ ತೀರಿಕೊಂಡ ನಂತರ ಮಣಿವಾಲ ತೊರೆದ ಪರ್ವಿನಾ ಬಾನು ಆಲಿಯಾಸ್ ಶಿಲ್ಪಾ ಮುಸಲ್ಮಾನರಹಳ್ಳಿಗೆ ಬಂದು ನೆಲೆಸಿದ್ದಳು. ಗಾರ್ಮೆಂಟ್ಸ್ ಕೆಲಸಕ್ಕೆ ಎಂದು ಹೋಗುತ್ತಿದ್ದ ಈಕೆ ವಾಟದಹೊಸಹಳ್ಳಿಯ ವಿನಯ್ ಜೊತೆ ಲಿವಿಂಗ್ ಟುಗೆದರ್ ರಿಲೇಶನ್ ಶಿಪ್ ಬೆಳೆಸಿಕೊಂಡಿದ್ದಳು.
ಈ ವಿನಯ್ ಸಹ ರಸ್ತೆ ಅಪಘಾತದಲ್ಲಿ ಮೃತಪಡುತ್ತಾನೆ. ಇದರಿಂದ ನೊಂದಿದ್ದ ಪರ್ವಿನಾ ಬಾನು ಸೆ.04 ರಂದು ತನ್ನ ತಂದೆ, ತಾಯಿ ಹಾಗೂ ದೊಡ್ಡಪ್ಪ ಕೆಲಸ ಮಾಡ್ತಿದ್ದ ಶ್ರೀನಿವಾಸಚಾರ್ಲಹಳ್ಳಿಯ ಮಾವಿನ ತೋಟಕ್ಕೆ ಹೋಗಿದ್ದಾಳೆ. ಆದರೆ, ಪರ್ವಿನಾ ಮುಬಾರಕ್ ತಾಯಿ ಗುಲ್ಜಾರ ಬಾನು ಅಕ್ಕನ ಗಂಡ ಪ್ಯಾರೇಜಾನ್ ಜೊತೆ ಅನೈತಿಕ ಸಂಬಂಧ ಹೊಂದಿದ್ದ ವಿಚಾರ ಮಗಳು ತಿಳಿದುಕೊಂಡಿದ್ದಳು.
ಈ ವೇಳೆ ಇವಳು ಇದ್ರೆ ನಮ್ಮ ಸಂಬಂಧಕ್ಕೆ ಅಡ್ಡಿ ಎಂದು ಪರ್ವಿನಾ ಬಾನು ಧರಿಸಿದ್ದ ಜಾಕೆಟ್ ನ ದಾರದಿಂದಲೇ ಕುತ್ತಿಗೆ ಬಿಗಿದು ಆಕೆಯ ಕೊಲೆ ಮಾಡಿದ್ದಾರೆ. ಬಳಿಕ ತಂದೆಗೂ ವಿಷಯ ತಿಳಿಸಿ ಮೂವರು ಸೇರಿ ಗಾಡಿಯಲ್ಲಿ ಮೃತದೇಹವನ್ನ ರಾತ್ರಿ ವೇಳೆ ತೆಗೆದುಕೊಂಡು ಹೋಗಿ ವಾಟದಹೊಸಹಳ್ಳಿ ಬಳಿಯ ಬಾವಿಯಲ್ಲಿ ಬಿಸಾಡಿದ್ದಾರೆ.
ಪರ್ವಿನಾ ಬಾನು ಗಂಡ ಹಾಗೂ ಪ್ರಿಯಕರನ ಸಾವಿನಿಂದ ಮನನೊಂದು ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಪೊಲೀಸರು ಅಂದಾಜಿಸಿದ್ರು. ಆದರೆ ಘಟನೆಯನ್ನು ಆಳವಾಗಿ ತನಿಖೆ ಕೈಗೊಂಡ ಪೊಲೀಸರಿಗೆ ತಂದೆ, ತಾಯಿ ಹಾಗೂ ಆಕೆಯ ದೊಡ್ಡಪ್ಪನೇ ಕೊಲೆ ಮಾಡಿರುವುದು ಎಂದು ಗೊತ್ತಾಗಿದೆ. ಸದ್ಯ ಮೂವರು ಆರೋಪಿಗಳನ್ನು ಪೊಲೀಸರು ಜೈಲಿಗಟ್ಟಿದ್ದಾರೆ.










