ಮದುವೆ ಹಾಗೂ ಎಲ್ಲಾ ಸಭೆ-ಸಮಾರಂಭಗಳಲ್ಲಿ ಓರ್ವ ಮಾರ್ಷಲ್ ಯೋಜನೆ: ಸಚಿವ ಡಾ.ಕೆ.ಸುಧಾಕರ್.

110
First Suddi

ಬೆಂಗಳೂರು : ಕೇರಳ, ಮಹಾರಾಷ್ಟ್ರದಲ್ಲಿ ಕೊರೊನಾ ಸೋಂಕು ಹೆಚ್ಚಾಗುತ್ತಿರುವ ಹಿನ್ನಲೆ ಮದುವೆ ಹಾಗೂ ಎಲ್ಲಾ ಸಮಾರಂಭಗಳಿಗೆ ಮಾರ್ಷಲ್ ಗಳನ್ನು ನಿಯೋಜಿಸಲು ನಿರ್ಧರಿಸಲಾಗಿದೆ ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಹೇಳಿದ್ದಾರೆ.
ವಿಧಾನಸೌಧದಲ್ಲಿಂದು ಕೋವಿಡ್ ಎರಡನೇ ಅಲೆ ಹಾಗೂ ಲಸಿಕೆ ಸಂಬಂಧ ಎಲ್ಲಾ ಡಿಸಿಗಳ ಜೊತೆ ವಿಡಿಯೋ ಸಂವಾದ ನಡೆಸಿದ ಬಳಿಕ ಮಾತನಾಡಿದ ಅವರು, ಮದುವೆ ಹಾಗೂ ಎಲ್ಲಾ ರೀತಿಯ ಶುಭ-ಸಮಾರಂಭಗಳಲ್ಲಿ ಮಾರ್ಷಲ್ ಗಳನ್ನು ನಿಯೋಜಿಸಲಾಗುತ್ತದೆ. ಈ ಮಾರ್ಷಲ್ ಗಳು ಸಾಮಾಜಿಕ ಅಂತರ, ಮಾಸ್ಕ್ ಧರಿಸುವ ಬಗ್ಗೆ ತಪಾಸಣೆ ಮಾಡಲಿದ್ದಾರೆ. ನಿಯಮ ಉಲ್ಲಂಘಿಸಿದವರ ವಿರುದ್ಧ ಕಾನೂನು ಪ್ರಕಾರ ದಂಡ ಸೇರಿ ಇತರ ಕ್ರಮ ಕೈಗೊಳ್ಳಲಿದ್ದಾರೆ.
ಅದೇ ರೀತಿ ಹೋಟೆಲ್, ಡಾಬಾ, ರೆಸ್ಟೋರೆಂಟ್ ಹಾಗೂ ಅಡುಗೆ ಮಾಡುವವರು ಸೇರಿ ಎಲ್ಲಾ ಆಹಾರ ತಯಾರಿಕೆ ಮಾಡುವವರ ಮೇಲೆ ನಿಗಾ ಇಡುವಂತೆ ತಿಳಿಸಲಾಗಿದೆ. ಅವರಿಗೂ ಕೋವಿಡ್ ಟೆಸ್ಟ್ ಮಾಡಿಸುವಂತೆ ಆರೋಗ್ಯ ಇಲಾಖೆ ನಿರ್ದೇಶಿಸಿದೆ. ಸಭೆ-ಸಮಾರಂಭಗಳು ತಾಂತ್ರಿಕ ಸಲಹಾ ಸಮಿತಿ ಮಾರ್ಗಸೂಚಿ ವಿರುದ್ಧ ನಡೀತಿವೆ. ಮತ್ತೆ ಸೋಂಕು ಹೆಚ್ಚಾದರೆ ಕಠಿಣ ಕ್ರಮ ಕೈಗೊಳ್ಳಬೇಕಾಗುತ್ತದೆ. ಹೀಗಾಗಿ ಜನರು ಸ್ವಯಂ ನಿಯಂತ್ರಣ ಮಾಡಿ ಸಹಕರಿಸದಿದ್ದರೆ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳುವುದು ಅನಿವಾರ್ಯವಾಗುತ್ತದೆ. ಆ ಪರಿಸ್ಥಿತಿಗೆ ಬರುವಂತೆ ಮಾಡಬೇಡಿ ಎಂದು ಎಚ್ಚರಿಕೆ ನೀಡಿದ್ದಾರೆ.
ಮಹಾರಾಷ್ಠ್ರದ ಕೆಲವು ಜಿಲ್ಲೆಗಳಲ್ಲಿ ಲಾಕ್ ಡೌನ್ ಘೋಷಿಸಿದ್ದಾರೆ. ಆ ಪರಿಸ್ಥಿತಿ ನಮ್ಮ ರಾಜ್ಯಕ್ಕೆ ಬರುವುದು ಬೇಡ. ಜನರು ಎಚ್ಚರಿಕೆ ವಹಿಸದೇ ಮದುವೆ ಸಮಾರಂಭಗಳನ್ನು ನಡೆಸುತ್ತಿದ್ದಾರೆ. ಹೀಗಾಗಿ ಮದುವೆ ಸಮಾರಂಭಗಳಿಗೆ ಮಾರ್ಷಲ್ ಗಳನ್ನು ನಿಯೋಜಿಸಲು ತೀರ್ಮಾನ ಮಾಡಿದ್ದೇವೆ ಎಂದು ಹೇಳಿದ್ದಾರೆ.