ಕೊಡಗು : ಮದುವೆಯಾದ ಮೂರೇ ದಿನಕ್ಕೆ ನವವಿವಾಹಿತೆಯೊಬ್ಬಳು ಅನುಮಾನಾಸ್ಪದವಾಗಿ ಸಾನ್ನಪ್ಪಿರುವ ಘಟನೆ ಜಿಲ್ಲೆಯ ಕುಶಾಲನಗರದ ಹೊಸಕೋಟೆ ಗ್ರಾಮದಲ್ಲಿ ನಡೆದಿದೆ.
ಅಕ್ಷತಾ (18) ಮೃತ ನವಾವಿವಾಹಿತೆ. ಹೇಮಂತ್ ಮತ್ತು ಅಕ್ಷತಾ ಕಳೆದ ಎರಡು ವರ್ಷಗಳಿಂದ ಪ್ರೀತಿಸುತ್ತಿದ್ದರು. ಪ್ರೀತಿ ವಿಚಾರವನ್ನು ಮನೆಯಲ್ಲಿ ಹೇಳಿ ವಿವಾಹವಾಗಲು ನಿರ್ಧರಿಸಿದ್ದರು. ಆದರೆ ಹೇಮಂತ್ ಮನೆಯವರು ಹುಡುಗಿ ಅನ್ಯ ಜಾತಿಗೆ ಸೇರಿದ್ದಾಳೆ ಎಂದು ಮದುವೆಗೆ ನಿರಾಕರಿಸಿದ್ದರು. ಇತ್ತ ಅಕ್ಷತಾ ಮನೆಯವರು ಕೂಡ ಮದುವೆಗೆ ನಿರಾಕರಿಸಿದ್ದರು. ಎರಡೂ ಕುಟುಂಬದವರು ಒಪ್ಪದಿದ್ದಾಗ 3 ದಿನಗಳ ಹಿಂದೆ ಇಬ್ಬರು ದೇವಾಲಯದಲ್ಲಿ ಮದುವೆಯಾಗಿದ್ದರು.
ವಿವಾಹವಾದ ಬಳಿಕ ಹೇಮಂತ್ ಮನೆಗೆ ಹೋಗಿದ್ದಾರೆ. ಆದರೆ ಯುವತಿ ಅನ್ಯ ಜಾತಿಗೆ ಸೇರಿದ್ದಾಳೆ, ನಮ್ಮ ಮನೆಗೆ ಬೇಡ ಎಂದು ಹುಡುಗನ ಮನೆಯವರು ಗಲಾಟೆ ಮಾಡಿದ್ದಾರೆ. ಮನೆಯವರ ವಿರೋಧದ ನಡುವೆಯೂ ಹೇಮಂತ್ ಅಕ್ಷತಾಳನ್ನು ಮನೆಯಲ್ಲಿ ಇರಿಸಿಕೊಂಡಿದ್ದಾನಂತೆ. ಆದರೆ ಮದುವೆಯಾಗಿ ಮೂರೇ ದಿನಕ್ಕೆ ಅಕ್ಷತಾ ಸಾವನ್ನಪ್ಪಿದ್ದಾಳೆ.
ಅಕ್ಷತಾಗೆ ಯಾವುದೇ ರೋಗ ಇರಲಿಲ್ಲ. ಅನ್ಯ ಜಾತಿಗೆ ಸೇರಿದ್ದಾಳೆಂದು ಹೇಮಂತ್ ಮನೆಯವರು ನನ್ನ ಮಗಳನ್ನು ಕೊಂದಿದ್ದಾರೆ ಎಂದು ಅಕ್ಷತಾ ಪೋಷಕರು ಆರೋಪ ಮಾಡಿದ್ದಾರೆ. ಅಲ್ಲದೇ ತಮ್ಮ ಮಗಳ ಸಾವಿಗೆ ನ್ಯಾಯ ಕೊಡಿಸುವಂತೆ ಪಟ್ಟು ಹಿಡಿದಿದ್ದಾರೆ. ಸದ್ಯ ಕುಶಾಲನಗರ ಸಮುದಾಯ ಆರೋಗ್ಯ ಕೇಂದ್ರಕ್ಕೆ ಮೃತದೇಹ ರವಾನೆ ಮಾಡಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಕುಶಾಲನಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.










