ಮದ್ಯದ ಅಮಲಿನಲ್ಲಿ ಸ್ನೇಹಿತನ ಮೇಲೆ ಕಾರು ಹತ್ತಿಸಿ ಹತ್ಯೆಗೈದ ಆರೋಪಿ ಅರೆಸ್ಟ್…

47
firstsuddi

ಬೆಂಗಳೂರು: ಮದ್ಯದ ಅಮಲಿನಲ್ಲಿ ಸ್ನೇಹಿತನ ಮೇಲೆ ಕಾರು ಹತ್ತಿಸಿ ಹತ್ಯೆಗೈದು ಬಳಿಕ ಅಪಘಾತದ ನಾಟಕ ಸೃಷ್ಟಿಸಿ ಪರಾರಿಯಾಗಿದ್ದ ವ್ಯಕ್ತಿಯನ್ನು ತಲಘಟ್ಟಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಕೋಣನಕುಂಟೆ ನಿವಾಸಿ ಮುನಿಕೃಷ್ಣ ಬಂಧಿತರಾಗಿದ್ದು, ಕೆಲ ದಿನಗಳ ಹಿಂದೆ ಹರಿನಗರದ ಆಟೋ ಚಾಲಕ ಗೋಪಿ (55) ಅವರನ್ನು ಮುನಿಕೃಷ್ಣ ಹತ್ಯೆ ಮಾಡಿದ್ದ. ಕೆಲ ದಿನಗಳ ಹಿಂದೆ ವಾಜರಹಳ್ಳಿ 100 ಅಡಿ ರಸ್ತೆಯಲ್ಲಿ ಆಟೋ ಚಾಲಕ ಗೋಪಿ ಮೃತದೇಹ ಪತ್ತೆಯಾಗಿತ್ತು.
ಆರಂಭದಲ್ಲಿ ಅಪರಿಚಿತ ಕಾರು ಡಿಕ್ಕಿಯಾಗಿ ಅವರು ಮೃತಪಟ್ಟಿರಬಹುದು ಎಂದು ಶಂಕಿಸಲಾಯಿತು. ಆದರೆ ತನಿಖೆ ನಡೆಸಿದಾಗ ಗೋಪಿ ಅವರದ್ದು ಕೊಲೆ ಎಂಬುದು ಗೊತ್ತಾಯಿತು ಎಂದು ದಕ್ಷಿಣ ವಿಭಾಗದ ಡಿಸಿಪಿ ಶಿವಪ್ರಕಾಶ್ ದೇವರಾಜ್ ತಿಳಿಸಿದ್ದಾರೆ. ಆನಂತರ ಅಪಘಾತ ಪ್ರಕರಣವನ್ನು ಕೊಲೆ ಪ್ರಕರಣವಾಗಿ ಬದಲಾಯಿಸಿ ತನಿಖೆ ಮುಂದುವರೆಸಿದಾಗ ಆರೋಪಿ ಪತ್ತೆಯಾಗಿದ್ದಾನೆ. ಪ್ರಕರಣವು ತಲಘಟ್ಟಪುರ ಠಾಣೆಗೆ ವರ್ಗಾವಣೆಯಾಗಿದೆ ಎಂದು ಡಿಸಿಪಿ ಹೇಳಿದ್ದಾರೆ.

ಘಟನೆಯ ಹಿನ್ನಲೆ:- ಮಾರ್ಚ್ 23ರಂದು ಬಾರ್‌ಗೆ ಮದ್ಯ ಸೇವಿಸಲು ತೆರಳಿದ್ದಾಗ ಗೋಪಿಗೆ ಅದೇ ಬಾರ್‌ನಲ್ಲಿ ಗೆಳೆಯರ ಜತೆ ಮದ್ಯ ಸೇವಿಸುತ್ತಿದ್ದ ಮುನಿಕೃಷ್ಣನ ಪರಿಚಯವಾಗಿದೆ. ಬಳಿಕ ಎಲ್ಲರೂ ಪರಸ್ಪರ ಮಾತನಾಡುತ್ತ ಮದ್ಯಪಾನ ಮಾಡಿದ್ದರು. ಆ ವೇಳೆ ಮದ್ಯದ ಅಮಲಿನಲ್ಲಿ ಕ್ಷುಲ್ಲಕ ಕಾರಣಕ್ಕೆ ಮುನಿಕೃಷ್ಣ ಹಾಗೂ ಗೋಪಿ ಮಧ್ಯೆ ಜಗಳ ಶುರುವಾಗಿದೆ. ಆಗ ಮಾತಿಗೆ ಮಾತು ಬೆಳೆದು ಪರಿಸ್ಥಿತಿ ವಿಕೋಪಕ್ಕೆ ತಿರುಗಿ ಪರಸ್ಪರ ಕೈ-ಕೈ ಮಿಲಾಯಿಸಿದ್ದರು. ಚಪ್ಪಲಿಯಿಂದ ಮುನಿಕೃಷ್ಣನಿಗೆ ಹೊಡೆಯಲು ಗೋಪಿ ಮುಂದಾಗಿದ್ದ.

ಕೊನೆಗೆ ಗೋಪಿಯನ್ನು ಸಮಾಧಾನಪಡಿಸಿ ಆತನ ಸ್ನೇಹಿತ ಕರೆದುಕೊಂಡು ಹೊರಟಿದ್ದರು. ಈ ಗಲಾಟೆಯಿಂದ ಕೆರಳಿದ ಮುನಿಕೃಷ್ಣ, ತಮ್ಮ ಕಾರಿನಲ್ಲಿ ಗೋಪಿಯನ್ನು ಹಿಂಬಾಲಿಸಿಕೊಂಡು ಬಂದು ಗುದ್ದಿಸಿ ಪರಾರಿಯಾಗಿದ್ದ. ಇತ್ತ ತನ್ನ ಸ್ನೇಹಿತನ ಕೊಲೆಯನ್ನು ಕಣ್ಣಾರೆ ನೋಡಿದ್ದ ಉಮಾಪತಿ ಮಾಲೂರಿಗೆ ಹೋಗಿ ಅಲ್ಲಿ ವಿಷ ಕುಡಿದು ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಮೃತನ ಅಂಗಿಯ ಮೇಲಿದ್ದ ಟೈಲರ್ ಸ್ಟಿಕ್ಕರ್ ಮೂಲಕ ಗೋಪಿ ಹೆಸರು ಮತ್ತು ವಿಳಾಸ ಪತ್ತೆ ಹಚ್ಚಲಾಯಿತು. ಆನಂತರ ಘಟನಾ ಸ್ಥಳದ ಸಿಸಿಟಿವಿ ಕ್ಯಾಮೆರಾಗಳನ್ನು ಪರಿಶೀಲಿಸಿದಾಗ ಕೊಲೆ ಎಂಬುದು ಗೊತ್ತಾಯಿತು ಎಂದು ಡಿಸಿಪಿ ವಿವರಿಸಿದ್ದಾರೆ.

ಸದ್ಯ ಉಮಾಪತಿ ಮಾಲೂರಿನಲ್ಲಿಯೇ ಚಿಕಿತ್ಸೆ ಪಡೆಯುತ್ತಿದ್ದಾನೆ ಎಂದು ದಕ್ಷಿಣ ವಿಭಾಗದ ಡಿಸಿಪಿ ಶಿವಪ್ರಕಾಶ್ ದೇವರಾಜ್ ತಿಳಿಸಿದರು.