ಭೋಪಾಲ್ : ಮಧ್ಯಪ್ರದೇಶದಲ್ಲಿ ಆಘಾತಕಾರಿ ಘಟನೆಯೊಂದು ಬೆಳಕಿಗೆ ಬಂದಿದೆ. ವ್ಯಕ್ತಿಯೊಬ್ಬ ತನ್ನ ಗೆಳತಿಯನ್ನು ಬರ್ಬರವಾಗಿ ಕೊಂದು ಬಳಿಕ ಆಕೆಯ ಶವದೊಂದಿಗೆ ವಿಡಿಯೋ ಮಾಡಿ ಆ ವಿಡಿಯೋವನ್ನು ಸೋಷಿಯಲ್ ಮೀಡಿಯಾದಲ್ಲಿ ಅಪ್ ಲೋಡ್ ಮಾಡಿದ್ದಾನೆ.
ಶಿಲ್ಪಾ ಝರಿಯಾ (25) ಮೃತ ಮಹಿಳೆ. ಜಬಲ್ ಪುರದ ಮೇಖ್ಲಾ ರೆಸಾರ್ಟ್ ನಲ್ಲಿರುವ ಕೊಠಡಿಯಲ್ಲಿ ಶಿಲ್ಪಾಳನ್ನು ಅಭಿಜಿತ್ ಎಂಬಾತ ಕರೆಸಿಕೊಂಡು ಆಕೆಯ ಕತ್ತು ಸೀಳಿ ಕೊಲೆ ಮಾಡಿದ್ದಾನೆ.
ವಿಡಿಯೋದಲ್ಲಿ ಏನಿದೆ?: ವಿಡಿಯೋದಲ್ಲಿ ಯಾರಿಗೂ ನಂಬಿಕೆ ದ್ರೋಹ ಮಾಡಬೇಡಿ ಎಂದು ಹೇಳುವ ಆತ ಹಾಸಿಗೆಯಲ್ಲಿ ರಕ್ತದ ಮಡುವಿನಲ್ಲಿ ಬಿದ್ದಿದ್ದ ಯುವತಿಯ ಶವವನ್ನು ತೋರಿಸುತ್ತಾನೆ. ಆಕೆಯ ಕುತ್ತಿಗೆ ಸೀಳಿ ಕೊಂದಿರುವುದು ಆ ವಿಡಿಯೋದಲ್ಲಿ ಸ್ಪಷ್ಟವಾಗಿ ಕಾಣುತ್ತದೆ.
ಮೂಲಗಳ ಪ್ರಕಾರ, ಪಾಟ್ನಾದ ವ್ಯಾಪಾರಿಯಾಗಿರುವ ಅಭಿಜಿತ್ನ ಗೆಳೆಯ ಜಿತೇಂದ್ರ ಆ ಯುವತಿಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದ. ಆಕೆ ಜಿತೇಂದ್ರ ಅವರಿಂದ ಸುಮಾರು 12 ಲಕ್ಷ ರೂ. ಸಾಲ ಪಡೆದು ಜಬಲ್ ಪುರಕ್ಕೆ ಪರಾರಿಯಾಗಿದ್ದಳು. ಹೀಗಾಗಿ, ಜಿತೇಂದ್ರನ ಸೂಚನೆ ಮೇರೆಗೆ ಆ ಯುವತಿಯನ್ನು ಅಭಿಜಿತ್ ಕೊಲೆ ಮಾಡಿದ್ದಾನೆ ಎನ್ನಲಾಗಿದೆ.
ಘಟನೆಗೆ ಸಂಬಂಧಿಸಿ ಜಬಲ್ ಪುರದ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು ಶಿಲ್ಪಾಳ ಮೃತದೇಹವನ್ನು ಮೇಖ್ಲಾ ರೆಸಾರ್ಟ್ ನಲ್ಲಿರುವ ಕೊಠಡಿಯಿಂದ ವಶಪಡಿಸಿಕೊಳ್ಳಲಾಗಿದೆ. ಇನ್ನೂ ಕೊಲೆ ಮಾಡಿದ ಅಭಿಜಿತ್ಗಾಗಿ ಪೊಲೀಸರು ಹುಡುಕಾಡುತ್ತಿದ್ದಾರೆ.










