ತಿರುವನಂತಪುರಂ : ಜುಲೈ 24ರಂದು ಕೇರಳದ ವಯನಾಡ್ ನಲ್ಲಿರುವ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಅವರ ಕಚೇರಿಯ ಮೇಲೆ ಎಸ್ಎಫ್ಐ ಕಾರ್ಯಕರ್ತರು ದಾಳಿ ಮಾಡಿದ್ದು, ಮಹಾತ್ಮ ಗಾಂಧಿ ಪೋಟೋಗೆ ಹಾನಿ ಉಂಟಾಗಿತ್ತು. ಇದೀಗ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಹುಲ್ ಗಾಂಧಿ ಕಚೇರಿ ಸಿಬ್ಬಂದಿ ಸೇರಿದಂತೆ ನಾಲ್ವರನ್ನು ಕೇರಳ ಪೊಲೀಸರು ಬಂಧಿಸಿದ್ದಾರೆ.
ಕಾಂಗ್ರೆಸ್ ಕಾರ್ಯಕರ್ತರು, ಎಸ್ ಎಫ್ ಐ ಕಾರ್ಯಕರ್ತರು ಗಾಂಧೀಜಿಯ ಭಾವಚಿತ್ರ ಧ್ವಂಸ ಮಾಡಿದ್ದಾರೆಂದು ವ್ಯಾಪಕವಾಗಿ ಪ್ರಚಾರ ನಡೆಸಿದ್ದರು. ಇದಕ್ಕೆ ತಿರುಗೇಟು ನೀಡಿದ್ದ ಎಸ್ಎಫ್ಐ, ಕಾಂಗ್ರೆಸ್ ಕಾರ್ಯಕರ್ತರೇ ರಾಷ್ಟ್ರಪಿತನ ಭಾವಚಿತ್ರಕ್ಕೆ ಹಾನಿ ಉಂಟು ಮಾಡಿದ್ದಾರೆ ಎಂದು ಪ್ರತಿ ಆರೋಪ ಮಾಡಿದ್ದರು. ಈ ಕುರಿತು ಪ್ರಕರಣ ದಾಖಲು ಮಾಡಿಕೊಂಡಿದ್ದ ಪೊಲೀಸರು ಸಂಪೂರ್ಣ ತನಿಖೆ ನಡೆಸಿದ್ದರು. ಇದೀಗ ತನಿಖೆಯ ವೇಳೆ ರಾಹುಲ್ ಗಾಂಧಿ ಅವರ ಆಪ್ತ ಸಹಾಯಕ ರತೀಶ್ ಕುಮಾರ್, ಸಂಸದರ ಕಚೇರಿ ಸಿಬ್ಬಂದಿ ರಾಹುಲ್ ಎಸ್ ರವಿ, ಕಾಂಗ್ರೆಸ್ ಕಾರ್ಯಕರ್ತರಾದ ನೌಶಾದ್ ಮತ್ತು ಮುಜೀಬ್ ಅವರು ಭಾವಚಿತ್ರ ಧ್ವಂಸ ಮಾಡಿದ್ದು ದೃಢಗೊಂಡಿದ್ದು, ಪೊಲೀಸರು ಅವರನ್ನು ಬಂಧಿಸಿದ್ದಾರೆ.










