ಮಹಾರಾಷ್ಟ್ರ ಮಾಜಿ ಸಿಎಂ ಮನೋಹರ್ ಜೋಶಿ ವಿಧಿವಶ…

42
firstsuddi

ನವದೆಹಲಿ: ಶಿವಸೇನೆಯ ಹಿರಿಯ ನಾಯಕ ಹಾಗೂ ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಮನೋಹರ್ ಜೋಶಿ (87) ಅವರು ವಿಧಿವಶರಾಗಿದ್ದಾರೆ.

ಮನೋಹರ್ ಜೋಶಿ ಅವರು ಹೃದಯಾಘಾತದಿಂದ ಮುಂಬೈನ ಹಿಂದೂಜಾ ಆಸ್ಪತ್ರೆಗೆ ದಾಖಲಾಗಿದ್ದು, ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಇಂದು ನಸುಕಿನ ಜಾವ 3 ಗಂಟೆಗೆ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ.

ಕಳೆದ ವರ್ಷ ಮೇ ತಿಂಗಳಲ್ಲಿ ಮಿದುಳು ರಕ್ತಸ್ರಾವದಿಂದ ಬಳಲುತ್ತಿದ್ದ ಜೋಶಿ ಅವರನ್ನು ಇದೇ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬಳಿಕ ಅವರು ಚೇತರಿಸಿಕೊಂಡ ನಂತರ ಅವರನ್ನು ಡಿಸ್ಚಾರ್ಜ್ ಮಾಡಲಾಗಿತ್ತು. ಅನಾರೋಗ್ಯದ ಹಿನ್ನೆಲೆಯಲ್ಲಿ ಕಳೆದ ಹಲವು ದಿನಗಳಿಂದ ಮನೋಹರ್ ಜೋಶಿ ಸಕ್ರಿಯ ರಾಜಕಾರಣದಿಂದ ದೂರ ಉಳಿದಿದ್ದರು.

ಮನೋಹರ್ ಜೋಶಿ ಅವರು ರಾಯಗಡ ಜಿಲ್ಲೆಯ ನಂಡ್ವಿ ಗ್ರಾಮದಲ್ಲಿ 1937ರ ಡಿಸೆಂಬರ್ 2 ರಂದು ಬ್ರಾಹ್ಮಣ ಕುಟುಂಬದಲ್ಲಿ ಜನಿಸಿದರು. ಎಂಎ ಮತ್ತು ಎಲ್​ಎಲ್​ಬಿ ಪದವಿಗಳನ್ನು ಮುಂಬೈ ವಿಶ್ವವಿದ್ಯಾಲಯದಿಂದ ಪಡೆದರು. ಮನೋಹರ್ ಜೋಶಿ ಅವರಿಗೆ ಪತ್ನಿ ಅನಘಾ ಜೋಶಿ, ಓರ್ವ ಪುತ್ರ ಉನ್ಮೇಶ್, ಪುತ್ರಿಯರಾದ ಅಸ್ಮಿತಾ ಮತ್ತು ನಮ್ರತಾ ಇದ್ದಾರೆ.

ಜೋಶಿ ಅವರು 1995 ರಿಂದ 1999 ರವರೆಗೆ ಮುಖ್ಯಮಂತ್ರಿಯಾಗಿದ್ದರು ಮತ್ತು ಅವಿಭಜಿತ ಶಿವಸೇನೆಯಿಂದ ರಾಜ್ಯದಲ್ಲಿ ಉನ್ನತ ಹುದ್ದೆಯನ್ನು ಅಲಂಕರಿಸಿದ ಮೊದಲ ನಾಯಕರಾಗಿದ್ದರು. ಸಂಸತ್ ಸದಸ್ಯರಾಗಿಯೂ ಆಯ್ಕೆಯಾಗಿದ್ದರು. ವಾಜಪೇಯಿ ಸರ್ಕಾರ ಅಧಿಕಾರದಲ್ಲಿದ್ದಾಗ 2002 ರಿಂದ 2004 ರವರೆಗೆ ಲೋಕಸಭೆಯ ಸ್ಪೀಕರ್ ಆಗಿದ್ದರು.