ಮೀನುಗಾರನನ್ನ ಉಲ್ಟಾ ನೇತುಹಾಕಿ ಹಲ್ಲೆ ನಡಸಿದ ಪ್ರಕರಣ ; ಆರು ಆರೋಪಿಗಳ ಬಂಧನ…

81
firstsuddi

ಮಂಗಳೂರು : ನಗರದ ಬಂದರ್ ದಕ್ಕೆಯಲ್ಲಿ ಆಂಧ್ರಪ್ರದೇಶ ಮೂಲದ ವೈಲ ಶೀನು(32) ಎಂಬ ಮೀನುಗಾರನೊಬ್ಬರನ್ನು ಮೊಬೈಲ್ ಕಳ್ಳತನದ ಆರೋಪ ಹೊರಿಸಿ ಕೈಕಾಲುಗಳನ್ನು ಕಟ್ಟಿ ತಲೆಕೆಳಗಾಗಿ ತೂಗು ಹಾಕಿ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರು ಮಂದಿ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಬಂಧಿತರನ್ನು ಕೊಂಡೂರು ಪೋಲಯ್ಯ(23), ಅವುಲ ರಾಜ್ ಕುಮಾರ್(26), ಕಾಟಂಗರಿ ಮನೋಹರ್(21), ವೂಟುಕೋರಿ ಜಾಲಯ್ಯ(30), ಕರಪಿಂಗಾರ ರವಿ(27) ಹಾಗೂ ಪ್ರಳಯಕಾವೇರಿ ಗೋವಿಂದಯ್ಯ(47) ಎಂದು ಗುರುತಿಸಲಾಗಿದೆ.

ಇವರೆಲ್ಲರೂ ಮೀನುಗಾರ ಕಾರ್ಮಿಕರಾಗಿದ್ದು, ಡಿಸೆಂಬರ್ 14 ರಂದು ಸಣ್ಣ ಪಾರ್ಟಿ ಇಟ್ಟುಕೊಂಡಿದ್ದರು. ಈ ಪಾರ್ಟಿ ಮುಗಿಸಿ ವೈಲ ಶೀನು (32) ಎಂಬಾತ ರಾತ್ರಿ ಬೋಟ್ನಲ್ಲಿ ಮಲಗಿದ್ದ. ಮರುದಿನ ಬೆಳಗ್ಗೆ ಬೋಟ್ ಬಳಿಗೆ ಬಂದ ಆರೋಪಿಗಳು ಪಾರ್ಟಿ ವೇಳೆ ಮೊಬೈಲ್ ಕದ್ದ ಆರೋಪ ಮಾಡಿ ಆತನ ಕಾಲಿಗೆ ಹಗ್ಗ ಕಟ್ಟಿ ಉಲ್ಟಾ ನೇತು ಹಾಕಿ ಹಲ್ಲೆ ನಡೆಸಿದ್ದಾರೆ. ಇದರ ವಿಡಿಯೋ ವೈರಲ್ ಆಗಿದ್ದು ಅದರಲ್ಲಿನ ಸಂಭಾಷಣೆ ನೋಡಿ ತಮಿಳುನಾಡು ಕಡೆಯಲ್ಲಿ ನಡೆದಿರಬಹುದೆಂದು ಶಂಕಿಸಲಾಗಿತ್ತು. ಬಳಿಕ ಕೂಲಂಕಷವಾಗಿ ಗಮನಿಸಿದಾಗ ಮಂಗಳೂರಿನ ದಕ್ಕೆಯಲ್ಲಿ ನಡೆದ ಘಟನೆ ಎಂದು ತಿಳಿದುಬಂದಿತ್ತು. ತನಿಖೆ ನಡೆಸಿ ಸಂತ್ರಸ್ತನನ್ನು ಪತ್ತೆ ಹಚ್ಚಿದ್ದು, ಆತನಿಂದ ದೂರು ಪಡೆದುಕೊಂಡು ಆರು ಮಂದಿಯನ್ನು ಬಂಧಿಸಲಾಗಿದೆ ಎಂದು ಮಂಗಳೂರು ನಗರ ಪೊಲೀಸ್ ಕಮಿಷನರ್ ಶಶಿಕುಮಾರ್ ತಿಳಿಸಿದ್ದಾರೆ.